ಗೋಣಿಕೊಪ್ಪ ನ.21 NEWS DESK : ಮಕ್ಕಳಲ್ಲಿ ನಾಯಕತ್ವ ಗುಣಗಳು ಬೆಳೆಯಬೇಕಾದರೆ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ತೊಡಗಿಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಪ್ರಾದೇಶಿಕ ಗವರ್ನರ್ ಕುಡುಪಿ ಅರವಿಂದ ಶೆಣೈ ತಿಳಿಸಿದರು. ಅಪ್ಪಚ್ಚು ಕವಿ ವಿದ್ಯಾಲಯದ ಸಭಾಂಗಣದಲ್ಲಿ ಲಯನ್ಸ್ ಕ್ಲಬ್, ಗೋಣಿಕೊಪ್ಪದ ಆಂಗ್ಲ ಸಂಸ್ಥೆಯಾಗಿ ಪೊನ್ನಂಪೇಟೆ ಅಪ್ಪಚ್ಚುಕವಿ ವಿದ್ಯಾಲಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಲಿಯೋ ಕ್ಲಬ್ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ, ನಾಯಕತ್ವದ ಗುಣಗಳ ಜತೆಗೆ ಸಾಮಾಜಿಕ ಕಳಕಳಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಸಾಮಾಜಿಕ ಜವಾಬ್ದಾರಿಯ ಅನುಭವಗಳನ್ನು ನೀಡಲು. ಜತೆಗೆ ತಮ್ಮ ಪ್ರತಿಭೆಗಳಿಗೆ ಅವಕಾಶಗಳನ್ನ ಒದಗಿಸಿಕೊಳ್ಳುವ ವ್ಯವಸ್ಥೆಯನ್ನು ನೀಡುವ ಉದ್ದೇಶದೊಂದಿಗೆ ಲಿಯೋ ಕ್ಲಬ್ ಸ್ಥಾಪನೆ ಮಾಡಲಾಗಿದೆ.ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಂಗಳೂರು, ಹಾಸನ ಜಿಲ್ಲೆಗಳಲ್ಲಿ ಸುಮಾರು 120 ಲಯನ್ಸ್ ಕ್ಲಬ್ ಗಳು ಕಾರ್ಯ ನಿರ್ವಹಿಸುತ್ತಿದೆ. ಅದರ ಜತೆಗೆ 40 ಲಿಯೋ ಕ್ಲಬ್ ಗಳು ಅಸ್ತಿತ್ವಕ್ಕೆ ಬಂದಿದೆ. 41ನೇಯ ಲಿಯೋ ಕ್ಲಬ್ ಸ್ಥಾಪನೆಯನ್ನು ಅಪ್ಪಚ್ಚು ಕವಿ ವಿದ್ಯಾಲಯದ ವಿದ್ಯಾರ್ಥಿಗಳ ಮುಖಾಂತರ ನೆರವೇರಿದೆ ಎಂದು ತಿಳಿಸಿದರು. ಅಪ್ಪಚ್ಚು ಕವಿ ವಿದ್ಯಾಲಯದ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿ, ಮಕ್ಕಳಿಗೆ ಮುಕ್ತ ಅವಕಾಶಗಳು ದೊರೆಯಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ. ಲಿಯೋ ಕ್ಲಬ್‍ನ ಮೂಲಕ ಸಮಾಜದಲ್ಲಿ ಶಿಸ್ತಿನ ನಡೆಯನ್ನು ಕಳಿತುಕೊಳ್ಳುವ ಅವಕಾಶವಿದೆ ಎಂದು ಹೇಳಿದರು. ಗೋಣಿಕೊಪ್ಪ ಲೈನ್ಸ್ ಕ್ಲಬ್ ಅಧ್ಯಕ್ಷ ಸಿಪಿ ಬೋಪಣ್ಣ ಅಧ್ಯಕ್ಷತೆಯಲ್ಲಿ ಲಿಯೋ ಕ್ಲಬ್‍ಗೆ ಚಾಲನೆ ನೀಡಲಾಯಿತು. ಅಪ್ಪಚ್ಚು ಕವಿ ವಿದ್ಯಾಲಯದಲ್ಲಿ ಲಿಯೋ ಕ್ಲಬ್‍ನ ಅಧ್ಯಕ್ಷರಾಗಿ ಆಯ್ಕೆಯಾದ ವಿದ್ಯಾರ್ಥಿನಿ ಭವ್ಯ ಎಸ್.ಕೆ, ಕಾರ್ಯದರ್ಶಿ ಹಸ್ಬೀನ ವೈ.ಹೆಚ್, ಕೋಶಾಧಿಕಾರಿಯಾಗಿ ಅಜಿತ್ ಪಿ.ಎನ್ ಇವರುಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಲಯನ್ಸ್ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಮನ್ನಕ್ಕಮನೆ ಸೌಮ್ಯ ಬಾಲು, ಖಜಾಂಜಿ, ಐ.ಎಂ ಸೋಮಣ್ಣ, ಅಪ್ಪಚ್ಚುಕವಿ ವಿದ್ಯಾಲಯದ ಉಪಾಧ್ಯಕ್ಷೆ ಮೂಕಳೇರ ಕಾವ್ಯ ಕಾವೇರಮ್ಮ, ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ, ಮುಖ್ಯೋಪಾಧ್ಯಾಯಿನಿ ತನುಜಾ ಸೇರಿದಂತೆ ಪ್ರಮುಖರಾದ ಕುಟ್ಟಪ್ಪ, ಧನು ಉತ್ತಯ್ಯ, ಬಾಲಕೃಷ್ಣ, ಅನಿಲ್ ಕುಮಾರ್, ಸ್ಮಿತಾ ಅನಿಲ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಲಯನ್ಸ್ ಕ್ಲಬ್ ಪದಾಧಿಕಾರಿಗಳು ಶಾಲೆಯ ಆಡಳಿತ ಮಂಡಳಿ ಇದ್ದರು.










