ಸೋಮವಾರಪೇಟೆ ನ.21 NEWS DESK : ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.22 ರಿಂದ 29ರ ವರೆಗೆ ಸಾಹಿತ್ಯ ಸಂಭ್ರಮ-2025 ನಡೆಯಲಿದ್ದು, ನ.22ರಂದು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಪರಿಷತ್ ನ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10ಗಂಟೆಗೆ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಧರ್ಮಗುರು ಅವಿನಾಶ್ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಲ್ಲಾ ಸ್ಪರ್ಧೆಗಳು ಕನ್ನಡ ನಾಡು ನುಡಿಗೆ ಸಂಬಂಧ ಪಟ್ಟಿರುತ್ತವೆ. ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಚಿತ್ರಕಲಾ ಸ್ಪರ್ಧೆ, ಪ್ರಬಂಧಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಜಾನಪದ ಗೀತೆ, ಸಮೂಹಗಾಯನ, ಜಾನಪದ ಅಥವಾ ಕನ್ನಡ ಹಾಡುಗಳಿಗೆ ನೃತ್ಯ ಸರ್ಧೆಗಳು ನಡೆಯುತ್ತವೆ. ಹೆಚ್ಚಿನ ಮಾಹಿತಿಗಾಗಿ, 8861550444, 8050252033 ಸಂಪರ್ಕಿಸಬಹುದು. :: ಸಮ್ಮೇಳನ ಪೂರ್ವಭಾವಿ ಸಭೆ :: ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕು, ಕ.ಸ.ಬಾ ಹೋಬಳಿ ಘಟಕದ ಆಶ್ರಯದಲ್ಲಿ ಐಗೂರಿನಲ್ಲಿ ನಡೆಯಬೇಕಾಗಿರುವ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ನ.26 ರಂದು ಐಗೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದೆ ಎಂದು ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಮತ್ತು ಹೋಬಳಿ ಅಧ್ಯಕ್ಷರುಗಳು, ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.










