ಮಡಿಕೇರಿ ನ.21 NEWS DESK : ಬೆಂಗಳೂರಿನಲ್ಲಿ ನಡೆದ ಮೂರು ದಿನದ ಅದ್ದೂರಿಯ ಪುಸ್ತಕ ಸಂತೆಯ ಒಂದು ಭಾಗವಾಗಿ, ಆಜೂರ ಪ್ರಶಸ್ತಿ ವಿಜೇತೆ, ಕೊಡಗಿನ ಬರಹಗಾರ್ತಿ ಕೃಪಾ ದೇವರಾಜ್ ಅವರು ಬರೆದ ಐದನೇ ಪುಸ್ತಕ “ಮಂತ್ರಪುಷ್ಪ” ಬಿಡುಗಡೆ ಕಂಡಿತು. ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ, ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಏರ್ಪಟ್ಟ ಬೃಹತ್ ಪುಸ್ತಕ ಸಂತೆಯ ಎರಡನೇ ದಿನದ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅವರು ಕೃಪಾ ದೇವರಾಜ್ ಅವರು ಬರೆದ ಕಥಾ ಸಂಕಲನ “ಮಂತ್ರ ಪುಷ್ಪ” ವನ್ನು ಲೋಕಾರ್ಪಣೆಗೊಳಿಸಿದರು. ವೀರಕಪುತ್ರ ಶ್ರೀನಿವಾಸ್ ಮತ್ತು ಹೆಸರಾಂತ ಕವಿಗಳು, ಬರಹಗಾರರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಕನ್ನಡದ ಹಿರಿಯ ಕಥೆಗಾರ ಎಸ್.ದಿವಾಕರ್ ಅವರು ಬರೆದ “ಎರಡು ರಟ್ಟುಗಳ ನಡುವೆ”, ಕಲಾವಿದ ಮತ್ತು ಲೇಖಕ ಪುಂಡಲೀಕ ಕಲ್ಲಿಗನೂರು ಅವರ “ಶಿಲ್ಪಕಲೆಯಲ್ಲಿ ರಾಮಾಯಣ”, ಲೇಖಕಿ ದೀಪಾ ಹಿರೇಗುತ್ತಿ ಅವರ “ಸೋಲು ಗೆಲುವಿನ ಗೆಳೆಯ” ಎಂಬ ಕೃತಿಗಳು ಬಿಡುಗಡೆಗೊಂಡವು. ಮೂರು ದಿನದ ಪುಸ್ತಕ ಸಂತೆಗೆ ಲಕ್ಷ ಕನ್ನಡಿಗರು ಭೇಟಿ ನೀಡಿದರು. ವಿವಿಧ ಲೇಖಕರ ಹಲವು ಲಕ್ಷ ಪುಸ್ತಕಗಳು ಮಾರಾಟವಾದವು. ಅದರ ನಡುವೆ ಕೊಡಗಿನಿಂದ ತೆರಳಿದ ಕೃಪಾ ದೇವರಾಜ್ ಮತ್ತು ಲೇಖಕ ನೌಶದ್ ಜನ್ನತ್ ಅವರು ಇರಿಸಿದ್ದ ಪುಸ್ತಕ ಮಳಿಗೆಯೂ ಆಕರ್ಷಣೆಯ ಕೇಂದ್ರವಾಗಿತ್ತು.











