ಮಡಿಕೇರಿ ನ.21 NEWS DESK : ನಗರದ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ “ಕನ್ನಡ ಕಲರವ” ರಸಪ್ರಶ್ನೆ ಸ್ಪರ್ಧೆ ನಡೆಯಿತು. ಬ್ರಹ್ಮಗಿರಿ ಸಹೋದಯ ಒಕ್ಕೂಟದ ವತಿಯಿಂದ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಂಕುರ್ ಪಬ್ಲಿಕ್ ಸ್ಕೂಲ್ ನಾಪೋಕ್, ಎಸ್.ಎಂ.ಎಸ್ ಶಾಲೆ ಅರಮೇರೀ, ನ್ಯಾಷನಲ್ ಅಕಾಡೆಮಿ ಗೋಣಿಕೊಪ್ಪ, ಕೊಡಗು ವಿದ್ಯಾಲಯ, ಸೈನಿಕ ಶಾಲೆ ಕೊಡಗು, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ ಹಾಗೂ ಸೇಂಟ್ ಆನ್ಸ್ ಸಿಬಿಎಸ್‌ಇ ಶಾಲೆ ಸಿದ್ದಾಪುರ ಸೇರಿದಂತೆ ಜಿಲ್ಲೆಯ ಹಲವು ಶಾಲೆಗಳ ತಂಡಗಳು ಭಾಗವಹಿಸಿ, ತೀವ್ರ ಸ್ಪರ್ಧೆ ನಡೆಸಿದವು. ಕನ್ನಡ ಭಾಷೆ, ಸಾಹಿತ್ಯ, ನಾಡಿನ ಸಂಸ್ಕೃತಿ, ಇತಿಹಾಸ ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಒಟ್ಟು ಹನ್ನೊಂದು ಸುತ್ತು ಗಳಲ್ಲಿ ಸ್ಪರ್ಧೆ ನಡೆದಿದ್ದು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡ ಶಿಕ್ಷಕಿ ಕುಮಾರಿ ಸುಲ್ಹತ್ ಅವರು ರಸಪ್ರಶ್ನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎ ಎಲ್ ಜಿ ಶಾಲೆಯ ಪ್ರಾಂಶುಪಾಲರಾದ ಜಾಯ್ಸ್ ವಿನಯ, “ಕನ್ನಡ ಕಲರವವು ಭಾಷಾಭಿಮಾನವನ್ನು ಹೆಚ್ಚಿಸುವ ಸಾಂಸ್ಕೃತಿಕ ಹಬ್ಬ. ಇಂತಹ ಕಾರ್ಯಕ್ರಮಗಳು ಯುವಪೀಳಿಗೆಯಲ್ಲಿ ಕನ್ನಡದ ಅರಿವು ಬೆಳೆಸಲು ಅಗತ್ಯವಿದೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವರದಿಗಾರ ಗಿರೀಶ್, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ಪರ್ಧೆಯಲ್ಲಿ ಸೈನಿಕ ಶಾಲೆ, ಕೊಡಗು ಪ್ರಥಮ ಸ್ಥಾನ ಪಡೆದರೆ, ಕೊಡಗು ವಿದ್ಯಾಲಯ ದ್ವಿತೀಯ ಸ್ಥಾನ ಹಾಗೂ ಕೆವಿಜಿ ಐಪಿಎಸ್ ಸುಳ್ಯ ತೃತೀಯ ಸ್ಥಾನ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಎ ಎಲ್ ಜಿ ಶಾಲೆಯ ಕಾರ್ಯದರ್ಶಿ ಜನಾಬ್ ಮೊಹಮ್ಮದ್ ಹನೀಫ್ ಅವರು ಬಹುಮಾನ ವಿತರಣೆ ಮಾಡಿ ಮಾತನಾಡಿ, “ಭಾಷೆ ಮಾನವೀಯತೆಗೆ ಸೇತುವೆಯಂತೆ ಕೆಲಸಮಾಡುವ ಸಾಧನ. ನಮ್ಮ ಮಣ್ಣಿನ ಭಾಷೆಯು ಮೌಲ್ಯಗಳನ್ನು ಸಾರುತ್ತದೆ. ಕನ್ನಡದ ಪರಂಪರೆ ಮತ್ತು ಸಂಸ್ಕೃತಿ ಉಳಿಯಲು ಎಲ್ಲರ ಸಹಕಾರ ಅಗತ್ಯ,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಿದಾನಂದ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಮಮತಾ ಮತ್ತು ನವ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಕುಮಾರಿ ಸುಜೋತಿ ಸ್ವಾಗತಿಸಿ, ವಂದಿಸಿದರು.











