ಮಡಿಕೇರಿ ನ.21 NEWS DESK : ನೂತನವಾಗಿ ರಚನೆಗೊಂಡಿರುವ ಚೇರಂಬಾಣೆಯ ಬೇಂಗ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು. ಬೇಂಗ್ ನಾಡ್ ಕೊಡವ ಸಮಾಜದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೇಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಚೇರಂಬಾಣೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಪಟ್ಟಮಾಡ ಸೀತಮ್ಮ ಗಣಪತಿ ಹಾಗೂ ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಪೊಡನೋಳಂಡ ತುಳಸಿ ಉತಪ್ಪ ಪೊಮ್ಮಕ್ಕಡ ಕೂಟವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಬಾಚರಣಿಯಂಡ ದಿನೇಶ್ ಗಣಪತಿ ಅವರು ನೂತನವಾಗಿ ಪೊಮ್ಮಕ್ಕಡ ಕೂಟವನ್ನು ರಚಿಸಿರುವ ಉದ್ದೇಶದ ಕುರಿತು ವಿವರಿಸಿದರು. ಮಹಿಳೆಯರು ಸಮಾಜದ ಶಕ್ತಿಯಾಗಿದ್ದಾರೆ, ನಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಮತ್ತು ಕಲಿಸಲು ಪೊಮ್ಮಕ್ಕಡ ಕೂಟ ವೇದಿಕೆಯಾಗಲಿದೆ ಎಂದರು. ಪಟ್ಟಮಾಡ ಸೀತಮ್ಮ ಗಣಪತಿ ಅವರು ಮಾತನಾಡಿ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯ ಪೊಮ್ಮಕ್ಕಡ ಕೂಟದಿಂದ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಪೊಡನೋಳಂಡ ತುಳಸಿ ಉತಪ್ಪ ಅವರು ಮಾತನಾಡಿ ನೂತನವಾಗಿ ಪೊಮ್ಮಕ್ಕಡ ಕೂಟದ ರಚನೆ ಹರ್ಷದಾಯಕ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಕೂಟದ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಲಿ ಮತ್ತು ಕೂಟ ಅಭಿವೃದ್ಧಿಯನ್ನು ಕಾಣಲಿ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಬಡ್ಡಿರ ನಳಿನಿ ಪೂವಯ್ಯ ಅವರು ಈ ದೇಶದಲ್ಲಿ ಪುರಾಣ ಕಾಲದಿಂದಲೇ ಸ್ತ್ರೀಕುಲಕ್ಕೆ ಪ್ರಾಮುಖ್ಯತೆ ನೀಡುತ್ತಾ ಬರಲಾಗಿದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಪೊಮ್ಮಕ್ಕಡ ಕೂಟದ ಅಭಿವೃದ್ಧಿಗೆ ಸರ್ವ ಸದಸ್ಯರ ಹಾಗೂ ಕೊಡವ ಸಮಾಜದ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಬೇಕೆಂದು ಮನವಿ ಮಾಡಿದರು. ಕೊಟ್ಟುಕತ್ತೀರ ಗ್ರೀಷ್ಮ ಹಾಗೂ ಕುಂಚೆಟ್ಟಿರ ಶಿಲ್ಪ ಪ್ರಾರ್ಥಿಸಿದರು, ಕೊಟ್ಟುಕತ್ತೀರ ಗ್ರೀಷ್ಮ ಸ್ವಾಗತಿಸಿ ಮುಖ್ಯ ಅತಿಥಿಗಳ ಕಿರು ಪರಿಚಯ ಮಾಡಿದರು. ಕಾರ್ಯದರ್ಶಿ ಪಟ್ಟಮಾಡ ಜಯಂತಿ ಚಂಗಪ್ಪ ವಂದಿಸಿದರು. ಖಜಾಂಚಿ ತೇಲಪಂಡ ಲಕ್ಷ್ಮಿ ಪೆಮ್ಮಯ್ಯ ನಿರೂಪಿಸಿದರು. ಬೇಂಗ್ ನಾಡ್ ಕೊಡವ ಸಮಾಜದ ಉಪಾಧ್ಯಕ್ಷರಾದ ಪಟ್ಟಮಾಡ ಪೊನ್ನಪ್ಪ, ನಾಪಂಡ ಪ್ರತಾಪ್ ದೇವಯ್ಯ, ಕಾರ್ಯದರ್ಶಿ ಕೇಕಡ ರೋಮಿ ಮೊಣ್ಣಪ್ಪ, ಖಜಾಂಚಿ ಬೊಪ್ಪಡತಂಡ ಕಿಶೋರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.










