ಮಡಿಕೇರಿ ನ.21 NEWS DESK : ಕೊಡಗು ಜಿಲ್ಲೆಯ ಕೆಲವು ಗ್ರಾ.ಪಂ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಜಲ್ ಜೀವನ್ ಮಿಷನ್ ಯೋಜನೆಗೆ ಹಿನ್ನಡೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವೆಂದು ದಿಶಾ ಸಮಿತಿಯ ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಯೋಜನೆಯ ಬಗ್ಗೆ ಆಸಕ್ತಿ ತೋರದೆ ಬೇಜವಾಬ್ದಾರಿತನ ತೋರುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಜಲ್ ಜೀವನ್ ಮಿಷನ್ ಅತ್ಯಂತ ಮಹತ್ವದ ಯೋಜನೆಯಾಗಿದೆ, ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಯೋಜನೆ ಹಿನ್ನಡೆ ಅನುಭವಿಸುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಗುತ್ತಿಗೆದಾರರು ಅಧಿಕಾರಿಗಳು ನೀಡಿದ ನೋಟಿಸ್ ಗೆ ತಲೆ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಡಗಿನ ಯಾವುದೇ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ವಿಳಂಬವಾಗುತ್ತಿದ್ದರೆ ಅಥವಾ ಗುತ್ತಿಗೆದಾರರಿಂದ ಸೂಕ್ತ ಸ್ಪಂದನೆ ಸಿಗದೇ ಇದ್ದರೆ ದಾಖಲೆ ಸಹಿತ ದಿಶಾ ಸಮಿತಿಯ ಸದಸ್ಯರ ಗಮನಕ್ಕೆ ತರಬಹುದು. ಸಂಸದರ ಕಚೇರಿಯ ಸಹಕಾರದಿಂದ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ರಾಕೇಶ್ ದೇವಯ್ಯ ತಿಳಿಸಿದ್ದಾರೆ. ಈಗಾಗಲೇ ನಿಟ್ಟೂರು, ಬೇಗೂರು, ಹೈಸೊಡ್ಲೂರು, ತಿತಿಮತಿ, ಕಾನೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು, ಶನಿವಾರಸಂತೆಯ ದುಂಡಳ್ಳಿ ಮತ್ತು ಮೂರ್ನಾಡು ಎಂ.ಬಾಡಗದ ಸಮಸ್ಯೆ ಸಂಸದರ ಗಮನಕ್ಕೆ ಬಂದಿದೆ. ಸಮಸ್ಯೆಯನ್ನು ಬಗೆಹರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.










