ಮಡಿಕೇರಿ ನ.22 NEWS DESK : ಮಳೆಹಾನಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ಐದು ವರ್ಷಗಳೇ ಕಳೆದಿದ್ದರೂ ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರು ಒದಗಿಸದ ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಲು ಮೇಕೇರಿ ಗ್ರಾ.ಪಂ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ವಾರ್ಡ್ ಸಂಖ್ಯೆ 2 ರ ನಿವಾಸಿಗಳು ನಿರ್ಧರಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ ಸದಸ್ಯ ಎ.ಎ.ಅಬ್ದುಲ್ ಖಾದರ್ ಅವರು ಮುಂದಿನ 3 ದಿನಗಳೊಳಗೆ ಕುಡಿಯುವ ನೀರನ್ನು ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಎದುರು ನಿವಾಸಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. 2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮಡಿಕೇರಿ ನಗರಸಭಾ ವ್ಯಾಪ್ತಿಯ ಇಂದಿರಾ ನಗರದ 22 ಕುಟುಂಬಗಳನ್ನು ಬಿಳಿಗೇರಿ ಗ್ರಾಮದ ವಾರ್ಡ್ ಸಂಖ್ಯೆ 2ಕ್ಕೆ ಸ್ಥಳಾಂತರಿಸಲಾಯಿತು. ಈ ಕುಟುಂಬಗಳಿಗೆ ಸರಕಾರ ಮನೆಗಳನ್ನು ನಿರ್ಮಿಸಿ ಕೊಟ್ಟಿದೆಯಾದರೂ ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಕೊಳವೆ ಬಾವಿಯೊಂದರ ನೀರನ್ನು ಟ್ಯಾಂಕ್ ಗೆ ಸಂಗ್ರಹಿಸಿ ಸರಬರಾಜು ಮಾಡಲಾಗುತ್ತಿದೆಯಾದರೂ ಗಡುಸಾದ ಈ ನೀರು ಕುಡಿಯಲು ಮತ್ತು ಇತರ ಯಾವುದೇ ಕೆಲಸಗಳಿಗೆ ಯೋಗ್ಯವಾಗಿಲ್ಲ. ಹಗಲು ಕೆಲಸ ಮುಗಿಸಿ ಬರುವ ನಿವಾಸಿಗಳು ಸಂಜೆಯ ನಂತರ ಪಕ್ಕದ ತೋಟದ ಬಾವಿಯಿಂದ ನೀರು ಹೊತ್ತು ತರಬೇಕಾದ ಪರಿಸ್ಥಿತಿ ಇದೆ. ಜಲ್ ಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಿಕೊಂಡಿದ್ದರೂ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭ ಈ 22 ಮನೆಗಳನ್ನು ಸೇರಿಸಿಲ್ಲ. ಸುಮಾರು 3 ತಿಂಗಳ ಹಿಂದೆ ಜಿ.ಪಂ ಸಿಇಒ ಅವರು ಹಾಕತ್ತೂರಿಗೆ ಭೇಟಿ ನೀಡಿದ್ದಾಗ ವಾರ್ಡ್ ಸಂಖ್ಯೆ 2 ರ ನಿವಾಸಿಗಳು ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವುದನ್ನು ವಿವರಿಸಲಾಗಿತ್ತು. ತಕ್ಷಣ ಸಿಇಒ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಲ್ ಜೀವನ್ ಮಿಷನ್ ಯೋಜನೆಯ ಅಭಿಯಂತರರಿಗೆ ಸೂಚನೆ ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಹಾಕತ್ತೂರು ಗ್ರಾ.ಪಂ ಜಲ್ ಜೀವನ್ ಮಿಷನ್ ಯೋಜನೆಯ ಟ್ಯಾಂಕ್ ನ್ನು ಮೇಕೇರಿ ಗ್ರಾ.ಪಂ ವ್ಯಾಪ್ತಿಯ ಬಿಳಿಗೇರಿಯಲ್ಲಿ ನಿರ್ಮಿಸಿದೆ. ಇದೇ ಟ್ಯಾಂಕ್ ನಿಂದ ವಾರ್ಡ್ ಸಂಖ್ಯೆ 2ಕ್ಕೆ ಕುಡಿಯುವ ನೀರು ಸರಬರಾಜು ಮಾಡುವಂತೆ ಮನವಿ ಮಾಡಿಕೊಂಡಿದ್ದರೂ ಸೂಕ್ತ ಸ್ಪಂದನೆ ದೊರೆತ್ತಿಲ್ಲ ಎಂದು ಅಬ್ದುಲ್ ಖಾದರ್ ಬೇಸರ ವ್ಯಕ್ತಪಡಿಸಿದರು. ಕುಡಿಯುವ ನೀರಿಗಾಗಿ ಕಳೆದ ಐದು ವರ್ಷಗಳಿಂದ ಕಾದು ಸಾಕಾಗಿದೆ, ಇನ್ನು ನಮಗೆ ಉಳಿದಿರುವ ಮಾರ್ಗ ಪ್ರತಿಭಟನೆಯೊಂದೆ ಎಂದು ತಿಳಿಸಿದರು. ವಾರ್ಡ್ ಸಂಖ್ಯೆ 2ರ ಮಳೆಹಾನಿ ಸಂತ್ರಸ್ತ ಮಹಿಳೆಯರು ಮಾತನಾಡಿ ಸುಮಾರು ಐದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಬೃಹತ್ ಟ್ಯಾಂಕ್ ನ ಗುಟ್ಟಮಟ್ಟದ ಬಗ್ಗೆ ಸಂಶಯವಿದ್ದು, ಬೀಳುವ ಸಾಧ್ಯತೆ ಇದೆ. ಸೋರಿಕೆಯ ಕಾರಣ ಟ್ಯಾಂಕ್ ನಲ್ಲಿ ಕಾಲು ಭಾಗ ಮಾತ್ರ ನೀರು ಶೇಖರಣೆಯಾಗುತ್ತಿದೆ. ಈ ಟ್ಯಾಂಕ್ ನ ಮೂಲಕ ಸರಬರಾಜು ಮಾಡುತ್ತಿರುವ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರಿನ ಕೊರತೆಯಿಂದ ಸಂಕಷ್ಟ ಎದುರಾಗಿದ್ದು, ಸಮಸ್ಯೆಯ ಕುರಿತು ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಈ ಹಿಂದೆ ವಿವರಿಸಲಾಗಿದೆ. ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಬಾರದು ಎಂದು ಶಾಸಕರು ಸೂಚನೆ ನೀಡಿದ್ದರೂ ಜಲ್ ಜೀವನ್ ಮಿಷನ್ ಟ್ಯಾಂಕ್ ನಿಂದ ನಮಗೆ ನೀರು ನೀಡುತ್ತಿಲ್ಲವೆಂದು ಟೀಕಿಸಿದರು. *ಖಾಲಿ ಮನೆ ಆತಂಕ* ಇಲ್ಲಿರುವ ಒಟ್ಟು 22 ಮನೆಗಳಲ್ಲಿ 4 ಮನೆಗಳು ಖಾಲಿ ಬಿದ್ದಿವೆ, ಮನೆ ಮಾಲೀಕರು ಅಪರೂಪಕ್ಕೆ ಬಂದು ಹೋಗುತ್ತಿದ್ದಾರೆ, ಅಪರಿಚಿತರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಯ ಬಾಗಿಲು ತೆರೆದುಕೊಂಡೇ ಇರುತ್ತದೆ, ಈ ಬೆಳವಣಿಗೆಯಿಂದ ಆತಂಕ ಮೂಡಿದೆ ಎಂದು ಮಹಿಳೆಯರು ಗಮನ ಸೆಳೆದರು. ಜಿಲ್ಲಾಡಳಿತ ಖಾಲಿ ಮನೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಮಳೆಹಾನಿ ಸಂತ್ರಸ್ತರ ಮನೆಗಳಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. *ವಿದ್ಯುತ್ ನೀಡುತ್ತಿಲ್ಲ* ಮೂಡ ಅನುಮತಿ ಪಡೆಯದೆ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಬಗ್ಗೆ ಇದೇ ಸಂದರ್ಭ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ ಸದಸ್ಯ ಎ.ಎ.ಅಬ್ದುಲ್ ಖಾದರ್ ಅವರು ಸರಕಾರ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಹೊಸ ನಿಯಮದ ಸುತ್ತೋಲೆ ತೋರಿಸಿ ವಿದ್ಯುತ್ ಸಂಪರ್ಕಕ್ಕೆ ಎನ್‍ಒಸಿ ನೀಡಲು ಸಾಧ್ಯವಿಲ್ಲವೆಂದು ಗ್ರಾ.ಪಂ ಪಿಡಿಒ ಹೇಳುತ್ತಿದ್ದಾರೆ. ಸರಕಾರದ ಈ ಕ್ರಮದಿಂದ ಗ್ರಾಮದ ಸುಮಾರು 28 ಮನೆಗಳು ವಿದ್ಯುತ್ ಸಂಪರ್ಕದಿಂದ ವಂಚಿತವಾಗುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದವರು ನಿವಾಸಿಗಳಾದ ಹೇಮಾವತಿ ಬಿ.ಬಿ, ದೀಪಿಕಾ ಎ, ನಿರ್ಮಲ ಟಿ.ವಿ, ಬೇಬಿ ಎಂ.ಎಲ್ ಹಾಗೂ ನಿರ್ಮಲ ಕೆ.ಜಿ ಉಪಸ್ಥಿತರಿದ್ದರು.











