ಮಡಿಕೇರಿ ನ.22 NEWS DESK : ಕೊಡಗು ಜಿಲ್ಲೆಯಲ್ಲಿ ಇರುವ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಕೊಡಗು-ಮೈಸೂರು ಸಂಸತ್ ಸದಸ್ಯರಾದ ಯದುವೀರ್ ಒಡೆಯರ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಯಿತು. ಕೊಡಗು ಜಿಲ್ಲೆಯಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚಿನ ಮಂದಿ ಅರೆಸೇನಾಪಡೆಯಲ್ಲಿ ಕರ್ತವ್ಯದಲ್ಲಿರುವ ಹಾಗೂ ನಿವೃತ್ತರಾಗಿರುವ ಯೋಧರಿದ್ದೇವೆ. ಬಹಳಷ್ಟು ಮಂದಿ ವೀರಾಂಗನೆಯರೂ (ವಿಧವೆಯರು)ಕೂಡ ಇದ್ದು, ಕಳೆದ 13 ವರ್ಷಗಳಿಂದಲೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಾಕಷ್ಟು ಮನವಿ ಸಲ್ಲಿಸುತ್ತಾ ಬಂದಿದ್ದರೂ ಸರ್ಕಾರದ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಗೆ ಅರೆಸೇನಾಪಡೆಯ ಯೋಧರನ್ನು ಪರಿಗಣಿಸಬೇಕು ಅಥವಾ ಅರೆಸೇನಾಪಡೆಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಅರೆಸೇನಾಪಡೆ ಯೋಧರ ಕುಟುಂಬಗಳಿಗೆ ನೆರವು ನೀಡಬೇಕು, ಈಗಾಗಲೇ ಸ್ವಾಧೀನದಲ್ಲಿರುವ ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 10/2 ರಲ್ಲಿನ 0.20 ಸೆಂಟು ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ, ಸರ್ಕಾರದಿಂದ ಅನುದಾನ ಒದಗಿಸಬೇಕು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಿಜಿಹೆಚ್‍ಎಸ್ ವೆಲ್ ನೆಸ್ ಸೆಂಟರ್ ತೆರೆಯಬೇಕು. ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಇರುವ ಇಸಿಹೆಚ್‍ಎಸ್ ಆರೋಗ್ಯ ಕೇಂದ್ರದಲ್ಲಿ ಅರೆಸೇನಾಪಡೆಯ ನಿವೃತ್ತ ಯೋಧರಿಗೂ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ಇನ್ನಿತರ ಸೌಲಭ್ಯಗಳಿಗಾಗಿ ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಮಾತನಾಡಿದ ಸಂಸದರು, ಈ ಬಗ್ಗೆ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯ ಮಾಡಲಾಗುತ್ತದೆ. ಹಾಗೆಯೇ ಕೇಂದ್ರ ಸರ್ಕಾರದಿಂದಲೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ಎಂ.ಜಿ.ಯತೀಶ್, ಉಪಾಧ್ಯಕ್ಷ ಪುಲಿಯಂಡ ಎಂ.ಚೆಂಗಪ್ಪ, ಸಂಚಾಲಕರಾದ ನೂರೇರಾ ಎಂ.ಭೀಮಯ್ಯ, ಕಾರ್ಯದರ್ಶಿ ಬಿ.ಎನ್.ರವೀಂದ್ರ, ನಿರ್ದೇಶಕರಾದ ಜಿ.ಕೆ.ದಿನೇಶ ಕುಮಾರ್, ರಾಜಶೇಖರ್, ಎಂ.ಎನ್. ಗೋಪಾಲ ಕೃಷ್ಣ, ಮನೋಹರ್ ಇದ್ದರು.











