ಮಡಿಕೇರಿ ನ.22 NEWS DESK : ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ವತಿಯಿಂದ ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ರೈತರು ಹಾಗೂ ಬೆಳೆಗಾರರ ಭೂಮಿ ಸಮಸ್ಯೆ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡ ರೈತರು, ಬೆಳೆಗಾರರು, ‘ಸಿ ಮತ್ತು ಡಿ’ ಭೂಮಿ ಹೋರಾಟಗಾರರು, ರೈತ ಸಂಘದ ಮುಖಂಡರು ಕಸ್ತೂರಿ ರಂಗನ್ ವರದಿ ಹಾಗೂ ಸಿ ಮತ್ತು ಡಿ ಭೂಮಿ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರುಗಳ ಮುಂದೆ ತಮ್ಮ ಅಳಲು ತೋಡಿಕೊಂಡರು. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ಗೊಂದಲಗಳಿಂದ ಇಂದು ಜಿಲ್ಲೆಯ ಸಹಸ್ರಾರು ರೈತರು ಮತ್ತು ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ. ಈ ಗೊಂದಲಗಳನ್ನು ಸರಿಪಡಿಸಿ ರೈತರು ಮತ್ತು ಬೆಳೆಗಾರರ ಪರವಾಗಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು. ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದ ಭೂಮಿಯನ್ನು ಇದೀಗ ಅರಣ್ಯ ಎಂದು ಉಲ್ಲೇಖಿಸಲಾಗುತ್ತಿದೆ. ಇದರಿಂದ ಬುಡಕಟ್ಟು ಕೃಷಿಕರ ಬದುಕು ದುರಂತಕ್ಕೆ ಸಿಲುಕಿದೆ. ಅರಣ್ಯ ಭೂಮಿ ಬಿಟ್ಟು ಕಂದಾಯ ಭೂಮಿಯಲ್ಲಿ ಕೃಷಿ ಮಾಡಿದರೂ ಆ ಭೂಮಿಯನ್ನು ಇದೀಗ ಅರಣ್ಯ ಎನ್ನಲಾಗುತ್ತಿದೆ ಎಂದು ಬುಡಕಟ್ಟು ಕೃಷಿಕರ ಸಂಘದ ಕುಡಿಯರ ಮುತ್ತಪ್ಪ ಆತಂಕ ತೋಡಿಕೊಂಡರು. ಸಿ ಮತ್ತು ಡಿ ಭೂಮಿ ಸಮಸ್ಯೆಯಿಂದ ಜಿಲ್ಲೆಯ 5 ಸಾವಿರಕ್ಕೂ ಅಧಿಕ ಕುಟುಂಬಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಿ ಮತ್ತು ಡಿ ಭೂಮಿಯಲ್ಲಿ 1905ರಿಂದ ಕೃಷಿ ಮಾತ್ರವಲ್ಲದೇ ಜನ ವಸತಿ ಪ್ರದೇಶವೂ ಇದ್ದು 2003ರಲ್ಲಿ ಅರಣ್ಯ ಎಂದು ಉಲ್ಲೇಖಿಸಲಾಗಿದೆ. ಸರಕಾರಿ ಅಧಿಕಾರಿಗಳಿಗೆ ಆರ್‍ಟಿಸಿ ತಿದ್ದುಪಡಿ ಮಾಡಲು ಅವಕಾಶ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಮುಕ್ಕೋಡ್ಲುವಿನ 2 ಎಕರೆ ಪೈಸಾರಿ ಭೂಮಿಯಲ್ಲಿ ಬೆಳೆಯಲಾಗಿದ್ದ ಕೃಷಿ ಬೆಳೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ನಾಶ ಮಾಡಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿ ಮತ್ತು ಡಿ ಭೂಮಿ ಹೋರಾಟಗಾರÀ ಸುರೇಶ್ ಚಕ್ರವರ್ತಿ ಆಗ್ರಹಿಸಿದರು. ರೈತ ಸಂಘದ ಮುಖಂಡ ಮನು ಸೋಮಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿ ಅಡಿಯಲ್ಲಿ ಹಲವಾರು ಗ್ರಾಮಗಳು ಬಫರ್ ಝೋನ್ ವ್ಯಾಪ್ತಿಗೆ ಒಳಪಡುತ್ತವೆ. ಸಿ ಮತ್ತು ಡಿ ಭೂಮಿ ಸಮಸ್ಯೆ ಕುರಿತು ರಾಜ್ಯ ಸರಕಾರ ರಚನೆ ಮಾಡಿರುವ ಎಸ್‍ಐಟಿ ಯಾವ ರೀತಿಯಲ್ಲಿ ಭೂಮಿ ಸಮಸ್ಯೆಯನ್ನು ಬಗೆಹರಿಸಲಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಸಿ ಮತ್ತು ಡಿ ಭೂಮಿ ವರ್ಗೀಕರಣಕ್ಕೆ ತಕ್ಷಣವೇ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಅವರು ಮಾತನಾಡಿ, ರಾಜ್ಯ ಸರಕಾರ ಸಮಿತಿ ರಚನೆ ಮಾಡಿರುವುದನ್ನು ಸ್ವಾಗತಿಸಿದರಲ್ಲದೇ, ಸಮಿತಿಯಲ್ಲಿರುವ ಅಧಿಕಾರಿಗಳು ಜನಪರವಾಗಿಲ್ಲ. ಸ್ಥಳೀಯ ಶಾಸಕರು ಹಾಗೂ ಉಸ್ತುವಾರಿ ಸಚಿವರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಿತಿ ರಚನೆ ಮಾಡುವ ಮೂಲಕ ಸಮಸ್ಯೆಯ ಚೆಂಡನ್ನು ಅಧಿಕಾರಿಗಳ ಕೈಗೆ ನೀಡಿದಂತಾಗಿದೆ. ಸಿ ಮತ್ತು ಡಿ ಭೂಮಿ ವರ್ಗೀಕರಣ, ಸಾಗುವಳಿ ಮಾಡಿದವರ ಸಮೀಕ್ಷೆ ಹಾಗೂ ಕೃಷಿ ಮಾಡಿದವರಿಗೆ ಯಾವುದೇ ನೋಟೀಸನ್ನು ನೀಡಲಾಗಿಲ್ಲ. ಸಿ ಮತ್ತು ಡಿ ಭೂಮಿಯನ್ನು ಅರಣ್ಯ ಎಂದು ಉಲ್ಲೇಖಿಸಿ ಅವೈಜ್ಞಾನಿಕ ಸುತ್ತೋಲೆ ಹೊರಡಿಸಲಾಗಿದೆ. ಇದನ್ನು ಹಿಂಪಡೆಯುವ ಅವಕಾಶವಿದೆ ಎಂದು ಸಭೆಗೆ ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಅವರು ಮಾತನಾಡಿ, ಜನ ವಿರೋಧಿ ಸುತ್ತೋಲೆಯನ್ನು ಸರಕಾರ ಹಿಂಪಡೆಯಬೇಕು. ಈ ಹಿಂದಿನ ಯಾವುದೇ ಸರಕಾರ ಕೂಡ ಸಿ ಮತ್ತು ಡಿ ಭೂಮಿಯಲ್ಲಿರುವ ರೈತರು ಮತ್ತು ಜನರನ್ನು ಒಕ್ಕಲೆಬ್ಬಿಸಲು ಆದೇಶ ನೀಡಿಲ್ಲ ಎಂದು ಸಭೆಯ ಗಮನ ಸೆಳೆದರು. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಶೇ.90ರಷ್ಟು ಭೂಮಿ ಸಿ ಮತ್ತು ಡಿ ವ್ಯಾಪ್ತಿಗೆ ಒಳಪಡುತ್ತದೆ. ಈ ಭೂಮಿಯನ್ನು ಜಂಟಿ ಸರ್ವೇ ನಡೆಸಿ ಕೃಷಿಕರಿಗೆ ಮಂಜೂರು ಮಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ಹೇಳಿದರು. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಂಚಾಲಕ ಧರ್ಮಜಾ ಉತ್ತಪ್ಪ ಮಾತನಾಡಿ, ಕೊಡಗು ಜಿಲ್ಲೆಯ 53 ಗ್ರಾಮಗಳು ಕಸ್ತೂರಿ ರಂಗನ್ ವರದಿಗೆ ಒಳಪಡುತ್ತವೆ. ರಾಜ್ಯದ 8 ಜಿಲ್ಲೆಗಳಲ್ಲಿ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತವಾಗಿದೆ. ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆ ಬಂದ ಸಂದರ್ಭ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ರಾಜಕೀಯ ಮರೆತು ಒಗ್ಗಟ್ಟಾಗಿ ಹೋರಾಟ ಮಾಡಿದ್ದಾರೆ. ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಒಟ್ಟು 10 ಸಾವಿರ ಸಹಿ ಸಂಗ್ರಹಿಸಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಅದರಂತೆ ರಾಜ್ಯ ಸರಕಾರ ಕೂಡ ವರದಿ ಜಾರಿಗೆ ತಮ್ಮ ವಿರೋಧ ಇರುವುದಾಗಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು. ಮಾಜೀ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಮಾತನಾಡಿ, 1974 ಏಪ್ರಿಲ್ 27ರ ಮೊದಲು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಮಾಡಿದ್ದರೆ ಅಂತಹ ಭೂಮಿಯನ್ನು ಮಾಲೀಕರಿಗೆ ನೀಡಬೇಕು. ಒಂದು ವೇಳೆ ಸಂರಕ್ಷಿತ ಅರಣ್ಯ ಒತ್ತುವರಿ ಮಾಡಿದ್ದರೆ ಅಂತಹ ಭೂಮಿಯನ್ನು ಸರಕಾರ ವಶಕ್ಕೆ ಪಡೆದು ಒತ್ತುವರಿದಾರರಿಗೆ ಪರ್ಯಾಯ ಭೂಮಿ ಒದಗಿಸಬೇಕೆಂದು ಕೇಂದ್ರ ಸರಕಾರವೇ ಈ ಹಿಂದೆ ಸುತ್ತೋಲೆ ಹೊರಡಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಈ ಭೂಮಿ ಸಮಸ್ಯೆ ಕೊಡಗು ಮಾತ್ರವಲ್ಲದೇ ಇಡೀ ಪಶ್ಚಿಮ ಘಟ್ಟ ಪ್ರದೇಶಕ್ಕೆ ವ್ಯಾಪಿಸಿದೆ. ರಾಜ್ಯದ ಯಾವುದೇ ಸರಕಾರವೂ ಸಿ ಮತ್ತು ಡಿ ಭೂಮಿ ಒತ್ತುವರಿದಾರರನ್ನು ಒಕ್ಕಲೆಬ್ಬಿಸಲು ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ. ಇವೆಲ್ಲ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿರುವ ಗೊಂದಲಗಳಾಗಿವೆ ಎಂದು ಹೇಳಿದರು. ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ, ರಾಜ್ಯದ 1 ಲಕ್ಷದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆ ಇದೆ. ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಮುಳುಗಡೆಯಾದ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶಕ್ಕೆ ಪ್ರತಿಯಾಗಿ ಬೇರೆ ಭೂಮಿ ನೀಡಲು ಸಿ ಮತ್ತು ಡಿ ಜಮೀನನ್ನು ಗುರುತಿಸಿರುವುದೇ ಈ ಸಮಸ್ಯೆಗಳಿಗೆ ಕಾರಣವಾಗಿದೆ. ಜಿಲ್ಲೆಯಲ್ಲಿ 11 ಸಾವಿರ ಎಕರೆ ಭೂಮಿಗೆ ರಾಜ್ಯದ ಬೇರೆ ಜಿಲ್ಲೆಯಲ್ಲಿ ಪರ್ಯಾಯ ಭೂಮಿ ನೀಡುವಂತಾಗಬೇಕು ಎಂದು ಹೇಳಿದರು. 1991ರಿಂದ 2017ರವರೆಗೆ ಇದೇ ಗೊಂದಲಗಳು ಮುಂದುವರೆದುಕೊಂಡು ಬಂದಿದೆ. ಸಮಸ್ಯೆ ಸೃಷ್ಟಿಯಾಗಲು ಅಧಿಕಾರಿಗಳು ಕೂಡ ಹೊಣೆಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಒತ್ತುವರಿಗಳಿಗೆ ಅವಕಾಶ ಇಲ್ಲ ಎಂಬುದನ್ನು ಸೆಕ್ಷನ್ 4 ಅಡಿ ಸೂಚಿಸಿಸಲಾಗಿದೆ ಎಂದು ಸಭೆಗೆ ಸ್ಪಷ್ಟಪಡಿಸಿದರು. ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಮಾತನಾಡಿ, ಕೇವಲ ಭಾವನೆಗಳಿಂದ ಸಮಸ್ಯೆ ಬಗೆಹರಿಯಲಾರದು. ಕಾನೂನಾತ್ಮಕವಾಗಿ ಹೋರಾಟ ಮಾಡಿದಲ್ಲಿ ಯಶಸು ದೊರೆಯುವ ಎಲ್ಲಾ ಸಾಧ್ಯತೆ ಇದೆ. 1994ರ ಸುತ್ತೋಲೆಯಿಂದ ಸಮಸ್ಯೆ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸರಕಾರದ ಆದೇಶವನ್ನು ಮೀರಿ ಸುತ್ತೋಲೆಗಳನ್ನು ಹೊರಡಿಸಿರುವುದು ಕಂಡು ಬಂದಿದೆ ಎಂದು ಹೇಳಿದರು. ಈ ಎಲ್ಲಾ ವಿಚಾರಗಳ ಕುರಿತು ಸುಪ್ರಿಂ ಕೋರ್ಟ್‍ನಲ್ಲೂ ಮೇಲ್ಮನವಿ ಸಲ್ಲಿಸಲು ಸರಕಾರ ಸಿದ್ದತೆ ಮಾಡಿಕೊಂಡಿದೆ. ರಾಜ್ಯ ಸರಕಾರ ಇದೀಗ ರಚನೆ ಮಾಡಿರುವ ಸಮಿತಿ ಮುಂದೆ ಸಿ ಮತ್ತು ಡಿ ಭೂಮಿಯ ವಿಚಾರಗಳನ್ನು ಮಂಡಿಸಬೇಕಿದೆ. ಇದರಿಂದ ಸಮಸ್ಯೆಗೆ ಪರಿಹಾರ ಸಾಧ್ಯವಿದೆ ಎಂದು ಹೇಳಿದರು. ಹಿಂದಿನ ಸರಕಾರದ ವಕೀಲರು ಕೋರ್ಟ್‍ನಲ್ಲಿ ಸಮರ್ಪಕ ವಾದ ಮಂಡಿಸಿಲ್ಲ. ಇದು ಕೂಡ ಸಿ ಮತ್ತು ಡಿ ಭೂಮಿ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಅವರು ಮಾತನಾಡಿ ಜಿಲ್ಲೆಯ ರೈತರು, ಬೆಳೆಗಾರರ ಸಮಸ್ಯೆಗಳನ್ನು ಅರಿತು ಶಾಸಕರ ಸಹಿತ ಕಂದಾಯ ಹಾಗೂ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಲಾಗಿದೆ. ಇದರ ಬಗೆಹರಿಕೆಗೆ ವಿಶೇಷ ಸಮಿತಿ ರಚನೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿತ್ತು. ಅದರಂತೆ ಇದೀಗ ಸಮಿತಿ ರಚನೆಯಾಗಿದ್ದು, ಯಾವ ರೀತಿಯಾಗಿ ಸಮಸ್ಯೆಗಳಿಗೆ ಪರಿಹಾರ ಕಾಣಬೇಕು ಎಂಬುದನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಸಲಹೆ ನೀಡಿದ್ದಾರೆ. ಜಿಲ್ಲೆಯ ಜನರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ಸೂಕ್ತ ಸ್ಪಂದನೆಯನ್ನು ನೀಡಲಿದೆ ಎಂದು ಸಚಿವ ಬೋಸರಾಜು ಅವರು ಭರವಸೆ ನೀಡಿದರು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸುನೀಲ್ ಸುಬ್ರಮಣಿ, ಕಾಫಿ ಬೆಳೆಗಾರ ಚೇರಂಡ ನಂದಾ ಸುಬ್ಬಯ್ಯ, ಕೊಲ್ಯದ ಗಿರೀಶ್, ಕೆ.ಎಂ. ಲೋಕೇಶ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ರೈತ ಸಂಘದ ಸುಜಯ್ ಬೋಪಯ್ಯ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಪಾಲ್ಗೊಂಡಿದ್ದರು.











