


ಕುಶಾಲನಗರ, ನ.25 NEWS DESK : ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಪರಿಷತ್ತಿನ ಕುಶಾಲನಗರ ತಾಲ್ಲೂಕು ಸಮಿತಿ ಹಾಗೂ ಪರಿಷತ್ತಿನ ಹೆಬ್ಬಾಲೆ ಹೋಬಳಿ ಘಟಕದ ವತಿಯಿಂದ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಹೆಬ್ಬಾಲೆ ಬನಶಂಕರಿ ವಾರ್ಷಿಕ ಜಾತ್ರೆ ಅಂಗವಾಗಿ ಏರ್ಪಡಿಸಲಾಗಿದ್ದ ಗ್ರಾಮೀಣ ಕವಿಗೋಷ್ಠಿ ಶೋತೃಗಳ ಗಮನ ಸೆಳೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 25 ಕ್ಕೂ ಹೆಚ್ಚು ಮಂದಿ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು. ಕವಿಗೋಷ್ಠಿ ಕುರಿತು ಆಶಯ ಭಾಷಣ ಮಾಡಿದ ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ.ಜಮೀರ್ ಅಹ್ಮದ್ ಮಾತನಾಡಿ, ಸುಂದರ ಹಸಿರು ಪರಿಸರದಲ್ಲಿ ಏರ್ಪಡಿಸಿರುವ ಗ್ರಾಮದ ಜಾತ್ರೆಯ ಅಂಗವಾಗಿ ಏರ್ಪಡಿಸಿರುವ ಇಂತಹ ಕವಿಗೋಷ್ಠಿಗಳು ಸ್ಥಳೀಯ ಗ್ರಾಮೀಣ ಯುವ ಹಾಗೂ ಉದಯೋನ್ಮುಖ ಕವಿಗಳಿಗೆ ಭವಿಷ್ಯತ್ತಿನಲ್ಲಿ ಉತ್ತಮ ಕವಿಗಳಾಗಿ ರೂಪುಗೊಳ್ಳಲು ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂದರು. ಗ್ರಾಮೀಣ ಪ್ರದೇಶದಲ್ಲಿ
ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡುವುದರ ಪರಿಣಾಮದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡ ಭಾಷೆಯು ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ ಎಂದರು. ಕವನ ರಚನೆ ಮಾಡುವವರಿಗೆ ಹಿರಿಯ ಕವಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು.
ಕವಿತೆ ರಚಿಸುವ ಕವಿಯ ಮೂಲ ಆಶಯವನ್ನು ಚ್ಯುತಿ ಬಾರದಂತೆ ಸಹೃದಯರು ಅರ್ಥೈಸಿಕೊಳ್ಳಲು ಕವಿಯೇ ಕವಿತೆಯ ರಚನೆಯ ಹಿನ್ನೆಲೆ ಮತ್ತು ಆಶಯವನ್ನು ದಾಖಲಿಸಬೇಕು ಎಂದರು. ಪ್ರಶಸ್ತಿಗಳಿಗಾಗಿ ಕವನ ರಚನೆ ಸಲ್ಲದು. ಕವಿತೆಗಳು ನೈಜತೆಯನ್ನು ಒಳಗೊಂಡು ಸಮಾಜವನ್ನು ಒಗ್ಗೂಡಿಸಿ ಏಕತೆಯನ್ನು ಸಾರುವಂತಹ ಆಶಯಗಳನ್ನು ಹೊಂದಿದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯ ಎಂದು ಡಾ.ಜಮೀರ್ ಅಭಿಪ್ರಾಯಪಟ್ಟರು.
ಕವಿಗೋಷ್ಠಿ ಉದ್ಘಾಟಿಸಿ ತಮ್ಮ ಸ್ವರಚಿತ ಕವನ ವಾಚಿಸಿ ಮಾತನಾಡಿದ ಹೆಬ್ಬಾಲೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿಯೂ ಆದ ಯುವ ಕವಿಯಾದ ಡಾ ಅಮೃತಾ, ಕವಿಗಳು ತಮ್ಮ ಕವನ ವಾಚಿಸುವುದರಿಂದ ನಮ್ಮ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಿಕೊಂಡು ಬರವಣಿಗೆ ಕೌಶಲವನ್ನು ವೃದ್ಧಿಗೊಳಿಸುವ ಮೂಲಕ ಉತ್ತಮ ಸಾಹಿತ್ಯ ರಚನೆಗೆ ಸಹಕಾರಿಯಾಗುತ್ತದೆ ಎಂದರು. ಯುವ ಕವಿಗಳು ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಉತ್ತಮ ಕವಿತೆಗಳನ್ನು ಬರೆಯಲು ಮಾರ್ಗದರ್ಶನ ಪಡೆದುಕೊಂಡು ನಾಡು- ನುಡಿ, ಕಲೆ , ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿಹಿಡಿಯಬೇಕು ಎಂದರು.
ಕನ್ನಡ ಭಾಷೆ, ಸಾಹಿತ್ಯ , ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳೆಸುವ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಿಸಲು ಕಾರಣರಾದ ಮೈಸೂರು ಮಹಾಸಂಸ್ಥೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾದದ್ದು ಎಂದು ಡಾ ಅಮೃತಾ ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಅವಕಾಶ ಒದಗಿಸುವ ದಿಸೆಯಲ್ಲಿ ಇಂತಹ ಕವಿಗೋಷ್ಠಿಯನ್ನು ಸಂಘಟಿಸಲಾಗಿದೆ. ಗ್ರಾಮೀಣ ಕಲೆ, ಸಾಹಿತ್ಯ , ಸಂಸ್ಕೃತಿ ಹಾಗೂ ಜನಪದ ಕಲೆಗಳನ್ನು ಪುನರುಜ್ಜೀವನಗೊಳಿಸುವ ದಿಸೆಯಲ್ಲಿ ಕಸಾಪ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗನ್ನು ಸಂಘಟಿಸಲಾಗುತ್ತಿದೆ ಎಂದರು. ಕವಿಗೋಷ್ಠಿಯನ್ನು ಯಶಸ್ವಿಗೊಳಿಸಲು ಸಹಕರಿಸಿದ ಕಸಾಪ ಪದಾಧಿಕಾರಿಗಳು ಹಾಗೂ ಸ್ಥಳೀಯರಿಗೆ ಮೂರ್ತಿ ಕೃತಜ್ಞತೆ ಸಲ್ಲಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಫ್ಯಾನ್ಸಿ ಮುತ್ತಣ್ಣ, ಮೆ.ನಾ.ವೆಂಕಟನಾಯಕ್, ಸಾಹಿತಿ ಭಾರದ್ವಾಜ ಕೆ.ಆನಂದತೀರ್ಥ, ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿಗಳಾದ ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ಪದಾಧಿಕಾರಿ ಎಂ.ಎನ್.ಕಾಳಪ್ಪ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್,
ಕಸಾಪ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ನಾಗರಾಜ್, ಕಸಾಪ ಹೆಬ್ಬಾಲೆ ಘಟಕದ ಕಾರ್ಯದರ್ಶಿಗಳಾದ ಎಚ್.ಎನ್.ಸುಬ್ರಮಣ್ಯ, ಕವಿತ ಪುಟ್ಟೇಗೌಡ, ಸ್ಥಳೀಯ ಉದ್ಯಮಿಗಳಾದ ಧರ್ಮರಾಮ್, ಹನುಮಾನ್ ರಮ್,ದೇವಾಲಯ ಸಮಿತಿಯ ಅಧ್ಯಕ್ಷ ಎಚ್.ಟಿ.ರಮೇಶ್, ಕಾರ್ಯದರ್ಶಿ ಸೋಮಣ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ರಘು, ನಿವೃತ್ತ ಯೋಧ ಪುಟ್ಟೇಗೌಡ( ತಾಂಡು ), ಜಿಲ್ಲಾ ಆರೋಗ್ಯ ನಿವೃತ್ತ ಶಿಕ್ಷಣಾಧಿಕಾರಿ ಪುಟ್ಟಪ್ಪ, ನಿವೃತ್ತ ಶಿಕ್ಷಕ ಎಚ್.ಎಸ್.ಲೋಕೇಶ್, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇದ್ದರು. ಕವಿಗೋಷ್ಠಿ ಸಂಘಟನೆ ಕುರಿತು ಡಾ ಅಮೃತಾ ಅವರ ತಾಯಿ ಪ್ರೇಮ
ಮೆಚ್ಚುಗೆ ವ್ಯಕ್ತಪಡಿಸಿದರು. ಕವಿಗೋಷ್ಠಿಯಲ್ಲಿ ಚುಟುಕು ಕವನಗಳು ವಾಚಿಸಿದ ಕವಿ ಹಾ.ತಿ.ಜಯಪ್ರಕಾಶ್ ಪ್ರೇಕ್ಷಕರನ್ನು ರಂಜಿಸಿದವು. :: ಕವನ ವಾಚಿಸಿದ ಕವಿಗಳು :: ಕವಿಗೋಷ್ಠಿಯಲ್ಲಿ ಸಂಪಾಜೆಯ ಸಹನಾ ಕಾಂತಬೈಲು, ಶಿವದೇವಿ ಅವನೀಶ್ಚಂದ್ರ, ಹರೀಶ್ ಸರಳಾಯ, ಹೇಮಂತ್ ಪಾರೇರಾ,
ಹೆ.ಹು.ಸುಂದರ್, ವಿನಯ ರಾಜಶೇಖರ್, ಅಕ್ಷಯ್ ಕಾಂತಬೈಲು, ಸುಕುಮಾರ್ ತೊರೆನೂರು, ರೇಣುಕಾ ಮುಕ್ಕಾಟಿ, ಕೆ.ಎಸ್.ನಳಿನಿ, ಸೈಮನ್,
ಎಂ.ಎಸ್.ಮಹೇಂದ್ರ, ಡಿ.ಕವಿತಾ, ನಾಗರಾಜ್, ವಿ.ಕೃಷ್ಣ,ಹಂಸವೇಣಿ, ಎ.ಆರ್.ಶೈಲಾ,ಕೆ.ಎನ್.ಅಕ್ಷತಾ, ಎಚ್.ಎಸ್.ಮಂಜುಳಾ ಸೇರಿದಂತೆ ಇತರರು ತಮ್ಮ ಸ್ವರಚಿತ ಕವನ ವಾಚಿಸಿ ಗಮನ ಸೆಳೆದರು.











