
ಗೋಣಿಕೊಪ್ಪ ಡಿ.2 NEWS DESK : ತಿತಿಮತಿ ಹನುಮೋತ್ಸವ ಸಮಿತಿ, ಶ್ರೀ ರಾಮ ಮಂದಿರ ವತಿಯಿಂದ ಎರಡನೇ ವರ್ಷದ ಹನುಮೋತ್ಸವ ತಿತಿಮತಿ ಗ್ರಾಮದಲ್ಲಿ ಆರು ದಿನಗಳ ಕಾಲ ನಡೆಯಲಿದೆ. ಹನುಮನ ಆರಾಧನೆ, ಪಠಣ, ಸಾಹಸ, ವಿಶ್ವಾಸ, ಭಕ್ತಿಗಳ ಬಗ್ಗೆ ಹನುಮ ಭಕ್ತರೆಡೆಗೆ ಪಸರಿಸುವ ಆಧ್ಯಾತ್ಮಿಕ ಕಾರ್ಯ ನಡೆಯಲಿದೆ. ಆರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ವಿವರಗಳನ್ನು ಸಮಿತಿ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ್ಪ ತಿತಿಮತಿ ಚಿಮ್ಮಿ ಸಂಕೀರ್ಣದಲ್ಲಿ ಹನುಮೋತ್ಸವ ಸಮಿತಿಯ ಪೂರ್ವ ತಯಾರಿ ಸಭೆಯಲ್ಲಿ ಮಾಹಿತಿ ನೀಡಿದರು. ದಿನಾಂಕ ಎರಡರಂದು ಹನುಮ ಮಾಲಧಾರಣೆ, ಆಂಜನೇಯ ಹೋಮ, ಮೂರರಂದು ನಿತ್ಯ ಪೂಜೆ ಹಾಗೂ ಹನುಮಂತನ ಭಜನೆ, ನಂತರ ದಿನಾಂಕ 6 ರಂದು ಬೆಳಗ್ಗೆ ಬಾರದ ಗುಂಡು ಎಸೆತ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಏರ್ಪಡಿಸಲಾಗಿದ್ದು, ಸಂಜೆ 6 ಗಂಟೆಗೆ ದಿಪೋತ್ಸವ ಮತ್ತು ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಡಿ.7 ರಂದು ಮಧ್ಯಾಹ್ನ 2 ಗಂಟೆಗೆ ಹನುಮ ಉತ್ಸವ ಮೂರ್ತಿಯನ್ನು ಹೊತ್ತು ಬೃಹತ್ ಶೋಭ ಯಾತ್ರೆ ನಡೆಯಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಹನುಮಭಕ್ತರು, ಹಿಂದೂ ಬಾಂಧವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಾಳುಮನಿ ಗಣಪತಿ ದೇವಸ್ಥಾನದಿಂದ ತಿತಿಮತಿ ಶ್ರೀರಾಮ ಮಂದಿರದವರೆಗೆ, ಭಜನೆ ಕುಣಿತ, ಡೊಳ್ಳು ಕುಣಿತ, ಚಂಡೆ ವಾದ್ಯ, ಜೊತೆಗೆ ಹನುಮನ ಸ್ಥಬ್ಧ ಚಿತ್ರಗಳ ಶುಭಯಾತ್ರೆಯ ಮೆರುಗಾಗಲಿದೆ. ಬೆಂಗಳೂರಿನ ವಿಶ್ವ ಹಿಂದೂ ಪರಿಷತ್ ಕ್ಷತ್ರೀಯ ಧರ್ಮ ಪ್ರಸಾರ ಪ್ರಮುಖ್ ಸೂರ್ಯನಾರಾಯಣ ಸಂಪನ್ಮೂಲ ವ್ಯಕ್ತಿಯಾಗಿ ಧರ್ಮದ ಪ್ರಾಮುಖ್ಯತೆ ಬಗ್ಗೆ ತಿಳಿಸಲಿದ್ದಾರೆ. ಹಿಂದೂ ಸಮಾಜದ ಜಾಗೃತಿ ಮತ್ತು ಸಂಘಟನೆಗಾಗಿ ಹನುಮ ಜಯಂತಿ ಆಚರಣೆ ಪ್ರಮುಖವಾದ ಪಾತ್ರವಾಗಿದೆ. ಜಾತಿ ಸಾಮರಸ್ಯವನ್ನು ಸಾರುವ ಉದ್ದೇಶದೊಂದಿಗೆ ಜಾತಿ ಜಾತಿಗಳಲ್ಲಿ ಭೇದಗಳನ್ನು ಎಣಿಸದೆ, ರಾಷ್ಟ್ರ ಭಾವನೆಯನ್ನು ಬಿತ್ತುವ ಉದ್ದೇಶದೊಂದಿಗೆ ಶ್ರೀ ರಾಮನ ಅನುಯಾಯಿ, ಆರಾಧಕ ಹನುಮಂತನ ಜಯಂತಿ ಪ್ರಮುಖ ಆಚರಣೆಯಾಗಿದೆ. ಹನುಮಂತನ ಭಕ್ತಿ ಆರಾಧನೆ, ಶಕ್ತಿ ಮತ್ತು ವಿದ್ವತ್ ಗುಣಗಳು ಪ್ರತಿಯೊಬ್ಬ ಹಿಂದುವಿನ ಹೃದಯದಲ್ಲಿ ಇರಬೇಕಾದಂತಹ ವ್ಯಕ್ತಿತ್ವವಾಗಿದೆ. ಇಂತಹ ಗುಣಗಳನ್ನ ಹಿಂದೂ ಜನರ ಭಾವನೆಯಲ್ಲಿ ಬೆರಿಸಲು ಹನುಮ ಜಯಂತಿ ಕಾರಣವಾಗುತ್ತಿದೆ ಎಂದು ಹೇಳಿದರು. ಹಿಂದೂ ರಾಷ್ಟ್ರ ಭಾರತದ ಶ್ರೇಷ್ಠತೆಯನ್ನು ವಿಶ್ವಕ್ಕೆ ತಿಳಿಸುವ ಕಾರ್ಯ ನಡೆಸಬೇಕಾಗಿದೆ. ಜತೆಗೆ ಈ ನೆಲದ ಆದರ್ಶ ಪುರುಷ ರಾಮನ ಭಂಟ ಹನುಮಂತನ ಗುಣಗಳು, ಸಮರ್ಪಣೆ ಮನೋಭಾವ, ನಿμÉ್ಠ, ಪ್ರಾಮಾಣಿಕತನ, ಲಾಭ, ನಷ್ಟಗಳ ಲೆಕ್ಕವಿಲ್ಲದ ಸೇವೆ ಮತ್ತು ಭಕ್ತಿಗಳು ಇವು ಈ ದೇಶದ ಆದರ್ಶ ಗುಣಗಳು ಎಂಬುದನ್ನು ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹನುಮಂತನ ಆರಾಧನೆ ಮತ್ತು ಜಯಂತಿಗಳು ಪ್ರತಿ ಗ್ರಾಮಗಳಲ್ಲಿಯೂ ನಡೆಸಬೇಕಾದ ಅಗತ್ಯತೆ ಇದೆ ಎಂದರು. ಸಮಿತಿ ಕಾರ್ಯದರ್ಶಿ ಪಾಲೆಂದರ ಮನು ನಂಜಪ್ಪ, ಸದಸ್ಯರುಗಳಾದ, ಪಿ.ಎನ್ ರವಿ, ಮಂಜುನಾಥ್ ಇದ್ದರು.









