ಮಡಿಕೇರಿ NEWS DESK ಡಿ.10 : ಕೊಡಗು ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಶಾಸಕರುಗಳು ಸ್ಪಷ್ಟ ಸೂಚನೆಯನ್ನು ನೀಡುವ ಮೂಲಕ ಸಾರ್ವಜನಿಕರ ಹಿತ ಕಾಯಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿಯ ಎಸ್‌ಟಿ ಮೋರ್ಚಾ ಒತ್ತಾಯಿಸಿದೆ. ವಿರಾಜಪೇಟೆ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎA.ಪರಮೇಶ್ವರ ಅವರು ಅತಿ ಮಳೆಯ ನೆಪವೊಡ್ಡಿ ರಸ್ತೆಗಳ ಗುಂಡಿ ಮುಚ್ಚುವ ತೇಪೆ ಕಾರ್ಯವನ್ನು ಇತ್ತೀಚೆಗಷ್ಟೇ ಆರಂಭಿಸಲಾಗಿದೆ. ಈ ಕಾಮಗಾರಿಯಲ್ಲಿ ನವೀನ ತಂತ್ರಜ್ಞಾನವನ್ನು ಬಳಸದೆ ಹಳೆಯ ಕ್ರಮವನ್ನು ಅನುಸರಿಸಲಾಗುತ್ತಿದೆ. ಇದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಗುಂಡಿಮಯವಾಗಿದ್ದು, ನಿಧಾನಗತಿಯ ಕಾಮಗಾರಿಯಿಂದ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈಗ ನಡೆಯುತ್ತಿರುವ ಕಾಮಗಾರಿಯ ವೇಗವನ್ನು ಗಮನಿಸಿದರೆ ಮುಂದಿನ ಮಳೆಗಾಲದವರೆಗೂ ಗುಂಡಿ ಮುಚ್ಚುವ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ ಎಂದು ವ್ಯಂಗ್ಯವಾಡಿದರು. ಜಿಲ್ಲೆಯ ಶಾಸಕದ್ವಯರು ರಸ್ತೆಗಳ ಅಭಿವೃದ್ಧಿ ಕುರಿತು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಯಾವ ರಸ್ತೆಯ ಕಾಮಗಾರಿಯೂ ಸಮರ್ಪಕವಾಗಿ ಪೂರ್ಣಗೊಳ್ಳುತ್ತಿಲ್ಲ. ಟೆಂಡರ್ ಪ್ರಕ್ರಿಯೆಯ ಸಂದರ್ಭ ಆಡಳಿತ ವ್ಯವಸ್ಥೆ ಎಡವಿರುವ ಸಾಧ್ಯತೆಗಳಿದೆ, ಗುತ್ತಿಗೆದಾರರು ಆಸಕ್ತಿಯಿಂದ ಕಾಮಗಾರಿ ಕೈಗೆತ್ತಿಕೊಂಡಿರುವ ಯಾವುದೇ ಕುರುಹುಗಳು ಇಲ್ಲಿಯವರೆಗೆ ಕಂಡು ಬಂದಿಲ್ಲ ಎಂದು ಟೀಕಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗುತ್ತಿಗೆದಾರರು ಕೂಡ ವಿಳಂಬಕ್ಕೆ ಕಾರಣವನ್ನು ತಿಳಿಸಬೇಕು ಮತ್ತು ತಮಗಾಗುತ್ತಿರುವ ಸಮಸ್ಯೆಗಳನ್ನು ಬಹಿರಂಗ ಪಡಿಸಬೇಕು ಎಂದು ಎಂ.ಎA.ಪರಮೇಶ್ವರ ಒತ್ತಾಯಿಸಿದರು. ಬೇತ್ರಿ ಕುಡಿಯುವ ನೀರಿನ ಯೋಜನೆಯನ್ನು ಮಳೆಗಾಲದಲ್ಲಿ ತರಾತುರಿಯಲ್ಲಿ ಆರಂಭಿಸಲಾಯಿತು. ಆದರೆ ಇದನ್ನು ಪೂರ್ಣಗೊಳಿಸಲು ಮೀನಾ ಮೇಷ ಎಣಿಸಲಾಗುತ್ತಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇನ್ನು ಎರಡು ವರ್ಷ ಕಳೆದರೂ ವಿರಾಜಪೇಟೆ ಜನರಿಗೆ ಕುಡಿಯುವ ನೀರು ಸಿಗುವುದು ಮರೀಚಿಕೆಯಾಗಿದೆ ಎಂದು ಆರೋಪಿಸಿದ ಅವರು, ಆಡಳಿತ ವ್ಯವಸ್ಥೆಯ ನಿರಾಸಕ್ತಿಯಿಂದ ಜನರು ಸಂಕಷ್ಟವನ್ನು ಎದುರಿಸುವಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.










