
ಮಡಿಕೇರಿ NEWS DESK ಫೆ.21 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಏ.6 ರಿಂದ ಏ.19 ರವರೆಗೆ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3 ಕ್ರಿಕೆಟ್ ಪಂದ್ಯಾವಳಿ ಗೋಣಿಕೊಪ್ಪದಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿದ್ದು, 175 ಕ್ಕೂ ಅಧಿಕ ಆಟಗಾರರು ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. ಪ್ರೀಮಿಯರ್ ಲೀಗ್ ಸೀಸನ್-3 ಕ್ರಿಕೆಟ್ ಗಾಗಿ ಫೆ.21 ರಂದು ಮಾಯಮುಡಿಯ ಎಲ್ಲೋ ಬೇಂಬೋ ರೆಸಾರ್ಟ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಟೀಮ್ ಕೊಡವ ಟ್ರೈಬ್, ಕೂರ್ಗ್ ಬ್ಲಾಸ್ಟರ್ಸ್, ಟೀಮ್ ಲಿವರೇಜ್, ಕೂರ್ಗ್ ಯುನೈಟೆಡ್, ಪ್ರಗತಿ ಕ್ರಿಕೆಟ್ ಅಕಾಡೆಮಿ, ಎಂಟಿಬಿ ರಾಯಲ್ಸ್, ಕೊಡವ ರೈಸಿಂಗ್ ಸ್ಟರ್ಸ್, ಅಂಜಿಗೇರಿ ನಾಡ್, ಕೂರ್ಗ್ ಟೈಟಾನ್ಸ್ ಹಾಗೂ ಬ್ಲೇಜ಼್ ಬ್ರಿಗೇಡ್ ತಂಡಗಳು ಪಾಲ್ಗೊಳ್ಳಲಿವೆ. ಗೋಣಿಕೊಪ್ಪದ ಕಾವೇರಿ ಕಾಲೇಜು ಮೈದಾನದಲ್ಲಿ ಏ.6 ರಿಂದ 14 ದಿನಗಳ ಕಾಲ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಎಲ್ಲಾ ಕೊಡವ ಭಾಷಿಕ ಜನಾಂಗದವರಿಗೆ ಅವಕಾಶ ಕಲ್ಪಿಸಲಾಗಿದೆ. ಕೊಡಗು ಮಾತ್ರವಲ್ಲದೆ ಜಿಲ್ಲೆಯ ಹೊರಗೆ ನೆಲೆಸಿರುವ ಕೊಡವರು ಹಾಗೂ ಕೊಡವ ಭಾಷಿಕರು ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೂರ್ಗ್ ಕ್ರಿಕೆಟ್ ಫೌಂಡೇಶನ್ನ ಅಧ್ಯಕ್ಷ ಪೊರುಕೊಂಡ ಸುನಿಲ್ ಹಾಗೂ ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ ತಿಳಿಸಿದರು. ಸೀಸನ್-3ರ ವಿಜೇತರಿಗೆ ಪ್ರಥಮ ರೂ.2 ಲಕ್ಷ, ದ್ವಿತೀಯ 1 ಲಕ್ಷ ಹಾಗೂ ತೃತೀಯ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು. ಅಲ್ಲದೇ ಪ್ರತಿ ಪಂದ್ಯಾವಳಿಯಲ್ಲಿ ಮ್ಯಾನ್ಆಫ್ ದಿ ಮ್ಯಾಚ್ ಆಕರ್ಷಕ ಟ್ರೋಫಿ ನೀಡಲಾಗುವುದು. ಪ್ರತಿದಿನ ಎರಡು ಟಿ-20 ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕೊಡಗು, ಮೈಸೂರು, ಮಂಗಳೂರು, ಚೆನ್ನೈ, ಪಾಂಡಿಚೇರಿ ಸೇರಿದಂತೆ ಉತ್ತರ ಭಾರತದ ಪ್ರತಿಷ್ಠಿತ ಆಟಗಾರರು ಕೂಡ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರ ಇರಲಿದೆ. ಕೊಡಗಿನ ಕ್ರೀಡಾ ಪ್ರತಿಭೆಗಳು ಲೆದರ್ ಬಾಲ್ ಕ್ರಿಕೆಟ್ ನಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಪ್ರತಿಭಾವಂತ ಯುವಕರನ್ನು ಗುರುತಿಸಿ ಅವರಿಗೆ ಕ್ರೀಡೆಯ ಬಗ್ಗೆ ಮಾರ್ಗದರ್ಶನ ನೀಡಿ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಉತ್ತೇಜನ ನೀಡುತ್ತಿದೆ ಎಂದು ಪೊರುಕೊಂಡ ಸುನಿಲ್ ಹಾಗೂ ಪಾಲಚಂಡ ಜಗನ್ ಉತ್ತಪ್ಪ ತಿಳಿಸಿದರು.










