
ಮಡಿಕೇರಿ ಏ.6 NEWS DESK : ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸೋಮವಾರಪೇಟೆಯ ಆಶ್ರೋ ಟರ್ಫ್ ಮೈದಾನದಲ್ಲಿ ಮೇ 7 ರಿಂದ 10ರ ವರೆಗೆ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ನಡೆಯಲಿದೆಯೆಂದು ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಿಧಿ ಲಿಂಗಪ್ಪ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗಳು ಆಯೋಜನೆಯಾಗದೆ ಸುಮಾರು ಇಪ್ಪತ್ತೈದು ವರ್ಷಗಳೆ ಕಳೆದಿದೆ. ಜಿಲ್ಲೆಯ ಯುವ ಹಾಕಿ ಪ್ರತಿಭೆಗಳ ಉತ್ತೇಜನಕ್ಕೆ ಪೂರಕವಾಗಿ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು. ಪಂದ್ಯಾವಳಿಯಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ತಂಡದೊಂದಿಗೆ, ಆಗ್ರೋಸ್, ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಸದರ್ನ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್ ಅಂಡ್ ಸೆಂಟ್ರಲ್ ಎಕ್ಸೈಸ್, ಡೈಸ್ ಸ್ಟೋರ್ಟ್ಸ್ ಹಾಸ್ಟೆಲ್, ಸದರ್ನ್ ಕಮಾಂಡ್ ತಂಡಗಳು ಪಾಲ್ಗೊಳ್ಳಲಿವೆ. ಈ ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡಗಳ ನಡುವೆ ಮೇ 10ರಂದು ಅಂತಿಮ ಪಂದ್ಯ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಕೃಷಿಗೆ ಪೂರಕವಾದ ಕಾರ್ಯಕ್ರಮಗಳೊಂದಿಗೆ ಸಾಮಾಜಿಕವಾದ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷರಾದ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಕ್ರೀಡಾ ಸಂಯೋಜಕರಾದ ಅಭಿಷೇಕ್ ಗೋವಿಂದಪ್ಪ, ಮಾಧ್ಯಮ ಸಂಯೋಜಕರಾದ ವಿಜಯ್ ಹಾನಗಲ್ ಮತ್ತು ಸದಸ್ಯ ಪ್ರೇಕ್ಷಿತ್ ಉಪಸ್ಥಿತರಿದ್ದರು.









