
ಮಡಿಕೇರಿ ಜೂ.24 NEWS DESK : ಲವ್ ಜಿಹಾದ್ ಮತ್ತು ಮತಾಂತರ ಪ್ರಕರಣಗಳ ವಿರುದ್ಧ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಜೂ.30ರಂದು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಜನ ಜಾಗೃತಿ ಜನಾಂದೋಲನಕ್ಕೆ ಕೊಡಗು ಹಿಂದೂ ಮಲೆಯಾಳಿ ಸಮಾಜ ಸಂಪೂರ್ಣ ಬೆಂಬಲ ಸೂಚಿಸಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ವಿವಾಹಿತ ಮಹಿಳೆ ಹಾಗೂ ಆಕೆಯ ಮಗನನ್ನು ಬಲವಂತವಾಗಿ ಕೇರಳಕ್ಕೆ ಕರೆದೊಯ್ದು ಮತಾಂತರ ಮಾಡಿದ ಪ್ರಕರಣ ನಡೆದಿದೆ. ಇದನ್ನು ಹಿಂದೂ ಮಲೆಯಾಳಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಅಪ್ರಾಪ್ತ ಬಾಲಕನಿಗೆ ಕಾನೂನು ಬಾಹಿರವಾಗಿ ಸುನ್ನತ್ ಮಾಡಿರುವ ಕ್ರಮ ಹಿಂಸಾತ್ಮಕವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು. ಘಟನೆ ನಡೆದ ಸ್ಥಳವನ್ನು ಪೊಲೀಸರು ಮಹಜರು ನಡೆಸಬೇಕು ಎಂದು ಆಗ್ರಹಿಸಿದರು. ಜೂ.30ರಂದು ನಡೆಯುವ ಹಿಂದೂ ಜನ ಜಾಗೃತಿ ಸಮಾವೇಶಕ್ಕೆ ಬೆಂಬಲ ನೀಡಲಿದ್ದು, ಎಲ್ಲಾ ಮಲೆಯಾಳಿ ಸಮಾಜ ಬಂಧುಗಳು ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭಟನೆ ದಾಖಲಿಸಬೇಕು ಎಂದು ಕರೆ ನೀಡಿದರು. ನಮ್ಮ ಸಮಾಜ ಯಾವುದೇ ಮತದ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದ ವಿ.ಎಂ.ವಿಜಯನ್, ಜಿಲ್ಲೆಯಲ್ಲಿ ಮತಾಂತರ ಪ್ರಕರಣಗಳು ನಡೆಯಬಾರದು ಎಂಬುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು. ಹಿಂದೂ ಸಮಾಜದ ಮಕ್ಕಳನ್ನು ಬಳಸಿಕೊಂಡು ಉಗ್ರಗಾಮಿ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರಕರಣಗಳನ್ನು ಎನ್‍ಐಎ ಮೂಲಕ ತನಿಖೆ ನಡೆಸಬೇಕು. ಮತಾಂತರ, ಲವ್ ಜಿಹಾದ್, ನಾಪತ್ತೆ ಪ್ರಕರಣಗಳ ಹಿಂದಿನ ಮೂಲಗಳ ಬಗ್ಗೆಯೂ ತನಿಖೆ ನಡೆಸುವ ಅಗತ್ಯವಿದೆ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಹಿಂದೂ ಮಲೆಯಾಳಿ ಸಮಾಜದ ಉಪಾಧ್ಯಕ್ಷ ಟಿ.ಕೆ.ಸುಧೀರ್, ಸಂಘದ ಪ್ರಮುಖರಾದ ಕೆ.ಆರ್.ವಾಸುದೇವ್, ಎನ್.ಸಿ.ಸುನಿಲ್ ಹಾಗೂ ಅಜೀಶ್ ಉಪಸ್ಥಿತರಿದ್ದರು.









