
ಮಡಿಕೇರಿ ಜೂ.25 NEWS DESK : ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯಸೌಧದಲ್ಲಿ ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಶಕ್ತಿ ಯೋಜನೆ: ಶಕ್ತಿ ಯೋಜನೆಯಿಂದ ಕೆಲಸ ಮಾಡುವ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದ್ದು, ಗೋಣಿಕೊಪ್ಪದಿಂದ-ಮೈಸೂರು, ಬೆಂಗಳೂರು ಮಾರ್ಗವಾಗಿ ಚಲಿಸುವ ಬಸ್ಸುಗಳ ಸಂಖ್ಯೆಯನ್ನು ರಜಾ ದಿನಗಳಲ್ಲಿ ಹೆಚ್ಚುವರಿ ಮಾಡಿ, ಸಾರ್ವಜನಿಕರು ರಜಾ ದಿನಗಳಲ್ಲಿ ಈ ಮಾರ್ಗವಾಗಿ ಹೆಚ್ಚು ಪ್ರಯಾಣಿಸುತ್ತಾರೆ. ನೂಕು-ನುಗ್ಗಲುಗಳಂತಹ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು ಕೂಡಲೇ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಿ ಸಮಸ್ಯೆ ಬಗೆಹರಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಬಸ್ಸುಗಳಲ್ಲಿ ಟಿಕೇಟ್ ಪಡೆಯಲು ಫೋನ್ ಪೇ ಮಾತ್ರ ಬಳಕೆಯಲಿದ್ದು, ಗೂಗಲ್ ಪೇ ತಾಂತ್ರಿಕ ಸಮಸ್ಯೆ ಎಂದು ಬರುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಕಲ್ಪಿಸಲು ತಿಳಿಸಲಾಯಿತು. ಯುವನಿಧಿ: ಪೊನ್ನಂಪೇಟೆ ತಾಲ್ಲೂಕಿನಲ್ಲಿ ಡಿಪ್ಲೋಮಾ ಹಾಗೂ ಐ.ಟಿ.ಐ.ಕಾಲೇಜುಗಳಿದ್ದು ಇಂತಹ ವಿದ್ಯಾರ್ಥಿಗಳನ್ನು ಹೆಚ್ಚು ನೊಂದಣಿ ಮಾಡಿಸಿ. ಇಲಾಖೆಯಿಂದ ಹೆಚ್ಚಿನ ಪ್ರಚಾರ ಮಾಡಬೇಕು, ವಿದ್ಯಾರ್ಥಿಗಳಿಗೆ ಈ ಯೋಜನೆಯ ಸದುಪಯೋಗವಾಗಬೇಕು. ಅದ್ದರಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಉದ್ಯೋಗ ಮೇಳ ಕೈಗೊಂಡು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಕರಿಸಿ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪ್ರಶಾಂತ್ ಅವರು ತಿಳಿಸಿದರು. ಅನ್ನಭಾಗ್ಯ: ನ್ಯಾಯಬೆಲೆ ಅಂಗಂಡಿಗಳಿಗೆ ಅಕ್ಕಿಯನ್ನು ತಿಂಗಳಲ್ಲಿ ಬೇಗ ಕಳುಹಿಸಿ 15 ರಿಂದ 20 ದಿನಗಳ ಒಳಗಾಗಿ ಅಕ್ಕಿ ಬರುವ ರೀತಿಯಲ್ಲಿ ನೋಡಿಕೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದ್ದು, ಈ ಸಂಬಂಧ ಗಮನಹರಿಸಿ ಇಂತಹ ಪ್ರಕರಣಗಳು ಆಗದಂತೆ ತಡೆಗಟ್ಟಲು ಅಧ್ಯಕ್ಷರು ಸೂಚಿಸಿದರು. ಎಸ್.ಸಿ. ಹಾಗೂ ಎಸ್.ಟಿ ಸಮುದಾಯದವರಿಗೆ ಹೊಸ ನ್ಯಾಯಬೆಲೆ ಅಂಗಡಿ ಆರಂಭಕ್ಕೆ ಅವಕಾಶವಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು. ಗೃಹಲಕ್ಷ್ಮಿ: ಮಾರ್ಚ್ ತಿಂಗಳ ಹಣ ಜಮೆಯಾಗದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಿ ಏಪ್ರಿಲ್ ತಿಂಗಳ ಹಣವು ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು ಅದರಲ್ಲಿ ಪೂರ್ತಿಯಾಗಿ ಎಲ್ಲಾ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ, ಈ ಕುರಿತು ರಾಜ್ಯ ತಂಡದ ಗಮನಕ್ಕೆ ತರಲಾಗಿದ್ದು ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹಾಗೂ ಮರಣ ಹೊಂದಿದ ಫಲಾನುಭವಿಗಳಿಗೂ ಸಹ ಹಣ ಜಮೆಯಾಗುತ್ತಿರುವುದು ಕಂಡುಬಂದಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಉತ್ತರಿಸಿದರು. ಗೃಹಜ್ಯೋತಿ: ಈಗಾಗಲೇ ಶೇ.98 ರಷ್ಟು ಪ್ರಗತಿಯಾಗಿದ್ದು, ಹೊಸದಾಗಿ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್ ಸೆಂಟರ್‍ಗೆ ಭೇಟಿ ನೀಡಲು ಸಭೆಯಲ್ಲಿ ತಿಳಿಸಲಾಯಿತು. ಮಳೆಗಾಲ ಪ್ರಾರಂಭವಾಗಿದ್ದು ತಾಲ್ಲೂಕಿನ ಕೆಲವು ಕಡೆ ಕಬ್ಬಿಣದ ಪೋಲ್ (ಕಬ್ಬಿಣದ ಕಂಬ) ಗಳಿದ್ದು ಬದಲಾಯಿಸಲು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ವಿರಾಜಪೇಟೆ ಸಹಾಯಕ ಲೆಕ್ಕಾಧಿಕಾರಿಗಳಾದ ಗಣೇಶ್ ಕುಮಾರ್, ಗ್ಯಾರಂಟಿ ಯೋಜನೆಯ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.









