
ಮಡಿಕೇರಿ ಆ.5 NEWS DESK : ಕೊಡಗಿನ ವಿಶಿಷ್ಟ ಸಂಸ್ಕೃತಿ ಪರಂಪರೆಗಳನ್ನು ಪ್ರತಿಬಿಂಬಿಸುವ ಮೂಲಕ ಜನ ಮನವನ್ನು ಗೆದ್ದಿರುವ “ವಾಂಟೆಡ್ ಬಾಲ” ಕಿರುಚಿತ್ರವನ್ನು ಇದೇ ಆ.7 ರಿಂದ 9ರವರೆಗೆ ಗೋಣಿಕೊಪ್ಪಲು ಸಿನಿಪ್ಲೆಕ್ಸ್ ಚಿತ್ರ ಮಂದಿರದಲ್ಲಿ ಪ್ರದರ್ಶಿಸಲಾಗುತ್ತದೆಂದು ಚಿತ್ರ ನಿರ್ದೇಶಕ ಸಂಕೇತ್ ಶಿವಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊಣಿಕೊಪ್ಪಲಿನ ಸಿನಿಪ್ಲೆಕ್ಸ್‍ನಲ್ಲಿ ಸೂಚಿತ ಮೂರು ದಿನಗಳಂದು ಬೆಳಗ್ಗೆ 11 ಗಂಟೆ, ಮಧ್ಯಾಹ್ನ 1 ಮತ್ತು 3 ಗಂಟೆಗೆ ಚಿತ್ರ ಪ್ರದರ್ಶನ ನಡೆಯಲಿದೆ. ಜಿಲ್ಲೆಯ ಸಿನಿ ಪ್ರಿಯರು ಕಿರು ಚಿತ್ರವನ್ನು ವೀಕ್ಷಿಸುವ ಮೂಲಕ ಚಿತ್ರ ತಂಡವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಸಾಹಿತಿಗಳಾದ ಮೇಜರ್ ಕುಶ್ವಂತ್ ಕೋಳಿಬೈಲು ಅವರ “ಕೂರ್ಗ್ ರೆಜಿಮೆಂಟ್” ಕೃತಿಯನ್ನು ಆಧರಿಸಿ ಕಿರುಚಿತ್ರವನ್ನು ನಿರ್ಮಿಸಲಾಗಿದೆ. ಕಿರುಚಿತ್ರದಲ್ಲಿ ಈಗಾಗಲೆ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಸಿದ್ಧಿ ಪಡೆದಿರುವ “ಪೂಡೆ ಪೂಡೆ ವಾ” ಹಾಡು ಸೇರಿದಂತೆ ಒಟ್ಟು ನಾಲ್ಕು ಹಾಡುಗಳು ಇರುವುದಾಗಿ ಮಾಹಿತಿ ನೀಡಿದರು. ಚಿತ್ರದಲ್ಲಿ ಸಂಕೇತ್ ಶಿವಪ್ಪ, ಪ್ರಮೀತಾ ಕೇಚಮಾಡ, ಗಗನ್ ಗಣಪತಿ, ರಮೇಶ್ ನಾಗರಹೊಳೆ, ಪಟ್ಟಡ ಧನುರಂಜನ್, ಮುಂಡಚಾಡಿರ ರಿನ್ನಿ ಭರತ್, ಅನನ್ಯ ಅಮೀನ್ ಸೇರಿದಂತೆ ಹಲ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ವಿಶೇಷ ಆಕರ್ಷಣೆಯಾದ “ಪೂಡೆ ಪೂಡೆ ವಾ” ಹಾಡಿಗೆ ಕೊಡವಚೇರಿರ ಉಮೇಶ್ ಹಾಗೂ ದುಗ್ಗಂಡ ರಿಕ್ಕಿ ಧ್ವನಿಯಾಗಿದ್ದಾರೆಂದು ವಿವರಗಳನ್ನಿತ್ತರು. ಲೇಖಕರಾದ ಡಾ.ಕುಶ್ವಂತ್ ಕೋಳಿಬೈಲು ಅವರು ಮಾತನಾಡಿ, ತಾನು ರಚಿಸಿರುವ ಕೂರ್ಗ್ ರೆಜಿಮೆಂಟ್ ಕೃತಿಯಲ್ಲಿನ ಒಂದು ಭಾಗದ ಕಥೆಯ ಎಳೆÉಯನ್ನು ಚಿತ್ರಕಥೆಯಾಗಿ ವಿಸ್ತರಿಸಿ, ಚಿತ್ರವನ್ನು ತೆಗೆಯಲಾಗಿದೆ. ಕರಾವಳಿ ಸಂಸ್ಕøತಿ ಪ್ರತಿಬಿಂಬಿಸುವ “ಕಾಂತಾರ” ಚಲನ ಚಿತ್ರದಂತೆಯೇ, ವಾಂಟೆಡ್ ಬಾಲ ಕಿರುಚಿತ್ರ ಕೊಡಗಿನ ಸಂಸ್ಕøತಿಯನ್ನು ಪಾನ್ ಕರ್ನಾಟಕ ಮಟ್ಟಕ್ಕೆ ವಿಸ್ತರಿಸುವ ಆಶಯ ತಮ್ಮದಾಗಿದೆ. ಚಿತ್ರ ಅತ್ಯಂತ ಅಚ್ಚುಕಟ್ಟಾಗಿ ಸೊಗಸಾಗಿ ಮೂಡಿ ಬಂದಿದೆ. ಮುಂಬರುವ ದಿನಗಳಲ್ಲಿ ಚಿತ್ರವನ್ನು “ಓಟಿಟಿ” ಮೂಲಕ ಹೊರ ತರುವ ಪ್ರಯತ್ನವು ನಡೆಯಲಿದೆಯೆಂದು ತಿಳಿಸಿದರು. ಚಿತ್ರ ನಟ ಆಚೀರ ಗಗನ್ ಗಣಪತಿ ಮಾತನಾಡಿ, ಅತ್ಯುತ್ತಮ ಕಥೆಯನ್ನು ಆಧರಿಸಿ ಚಲನ ಚಿತ್ರ ಮೂಡಿ ಬಂದಿದೆಯೆಂದು ಸಂತಸ ವ್ಯಕ್ತಪಡಿಸಿದರು. ಚಿತ್ರ ನಟ ಹಾಗೂ ಕೋರಿಯೋಗ್ರಾಫರ್ ಸಿ.ವಿಷ್ಣು ಚಂದ್ರು ಅವರು, ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಜನರಲ್ಲಿ ಮನವಿ ಮಾಡಿದರು. ಚಿತ್ರ ನಟರಾದ ಕಡೇಮಾಡ ಸುಮನ್ ಮಾತನಾಡಿ, ವಾಂಟೆಡ್ ಬಾಲ ಕಿರು ಚಿತ್ರದ ” ಪೂಡೆ ಪೂಡೆ ವಾ” ಹಾಡು ಈಗಾಗಲೆ ಪ್ರಸಿದ್ಧಿಯನ್ನು ಪಡೆದಿದ್ದು, ಸಾಮಾಜಿಕ ಜಾಲ ತಾಣದಲ್ಲಿ 4 ಲಕ್ಷಕ್ಕೂ ಹೆಚ್ಚಿನ ಮೆಚ್ಚುಗೆಯನ್ನು ಪಡೆದಿರುವುದಾಗಿ ತಿಳಿಸಿದರು.









