
ಮಡಿಕೇರಿ ಆ.5 NEWS DESK : ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸದ್ಯ ಇದುವರೆಗಿನ ಮಳೆ ಪ್ರಮಾಣ, ಹಾರಂಗಿ ಜಲಾಶಯ ನೀರಿನ ಮಟ್ಟ ಹಾಗೂ ಬೆಳೆ ಪರಿಸ್ಥಿತಿ ಮತ್ತಿತರ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದ್ದಾರೆ. ನಗರದ ಜಿ.ಪಂ.ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ಕುರಿತು ಬುಧವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಸಚಿವರು ಮಾತನಾಡಿದರು. ಹವಾಮಾನ ವೈಪರಿತ್ಯದಿಂದ ಈ ಬಾರಿ ಮುಂಗಾರು ಆರಂಭವಾಗುವುದು ತಡವಾಗಿದೆ. ಜಿಲ್ಲೆಯ ಅಲ್ಲಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಆದರೂ ಸಹ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಭತ್ತ ನಾಟಿ ಕಾರ್ಯ ಹಾಗೂ ಇತರ ಕೃಷಿ ಚಟುವಟಿಕೆ ನಡೆಯಲಿದೆ ಎಂದು ಸಚಿವರು ಹೇಳಿದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ಸ್ಥಳೀಯ ಸಂಸ್ಥೆ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯ ರಸ್ತೆಗಳು ಗುಂಡಿ ಬಿದ್ದಿದ್ದು, ಇವುಗಳನ್ನು ಮುಚ್ಚಲು ಅನುದಾನಕ್ಕೆ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದು ಇದೇ ಸಂದರ್ಭ ಸಚಿವರು ತಿಳಿಸಿದರು. ರಸ್ತೆ ಸರಿಪಡಿಸುವ ಸಂಬಂಧ ಟೆಂಡರ್ ಆಹ್ವಾನಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವಂತಾಗಬೇಕು ಎಂದು ಸಚಿವರು ಸೂಚಿಸಿದರು. ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು, ಸರ್ಕಾರದ ಆಶಯದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ಕುರಿತು ಜಿಲ್ಲೆಯ ಹಾರಂಗಿ ಜಲಾಶಯ ಹಾಗೂ ಕೃಷಿ ಮತ್ತು ತೋಟಗಾರಿಕ ಬೆಳೆಗಳ ವೀಕ್ಷಣೆ, ಗೋಶಾಲಾ ವೀಕ್ಷಣೆ ನಡೆಸಿ, ಸಭೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು, ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಇದರಿಂದಾಗಿ ರಸ್ತೆ ಹಾಳಾಗಿದ್ದು, ಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕೆಂದು ಎಂಜಿನಿಯರ್‍ಗಳಿಗೆ ತಾಕೀತು ಮಾಡಿದರು.
ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಇನ್ನೂ ಟೆಂಡರ್ ಆಹ್ವಾನಿಸಿದೆ ಗುಂಡಿಮುಚ್ಚುವ ಕೆಲಸ ಆರಂಭವಾಗಿಲ್ಲ. ಹೀಗಾದರೆ ಸಾರ್ವಜನಿಕರು ಓಡಾಟ ಹೇಗೆ ಎಂದು ಮಂತರ್ ಗೌಡ ಅವರು ಪ್ರಶ್ನಿಸಿದರು. ಕುಶಾಲನಗರದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಿ ದಶಕಗಳೇ ಕಳೆದಿದ್ದರೂ ಸಹ ಕಾಮಗಾರಿ ಪೂರ್ಣಗೊಳಿಸದೇ ಇರುವುದಕ್ಕೆ ಶಾಸಕರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್ ಅವರು, ಒಳಚರಂಡಿ ಮಂಡಳಿ ಎಂಜಿನಿಯರ್ ಮತ್ತು ಪುರಸಭೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿಲ್ಲ. ಇದರಿಂದ ಜನರಿಗೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಶೇ.37 ರಷ್ಟು ಮಳೆಯ ಕೊರತೆ ಇದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಶಾಂತಳ್ಳಿ, ಕುಶಾಲನಗರ, ಹುದಿಕೇರಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಕೊರತೆ ಇದೆ ಎಂದರು.
ಜುಲೈ ತಿಂಗಳಲ್ಲಿ ವಾಡಿಕೆ ಮಳೆ 859 ಮಿ.ಮೀ ಆಗಿದ್ದು, ಇದರಲ್ಲಿ 599 ಮಿ.ಮೀ ಮಾತ್ರ ಈ ಬಾರಿ ಮಳೆಯಾಗಿದೆ ಎಂದು ವಿವರಿಸಿದರು.
ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಹೋಬಳಿ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 20 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ಈ ಬಾರಿ ಪೂರ್ವ ಮುಂಗಾರು ಸಂದರ್ಭದಲ್ಲಿ 13 ಮತ್ತು ಮುಂಗಾರಿನಲ್ಲಿ 31 ಒಟ್ಟು 44 ಮನೆ ಹಾನಿ ಪ್ರಕರಣಕ್ಕೆ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಮುಂಗಾರು ಸಂದರ್ಭದಲ್ಲಿ ಇಬ್ಬರು ಮೃತಪಟ್ಟಿದ್ದು, ಅವರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ 19 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಮತ್ತು ಮುಸುಕಿನ ಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, 2800 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ. ಆಗಸ್ಟ್ ತಿಂಗಳ ಅಂತ್ಯದ ವರೆಗೂ ಭತ್ತ ನಾಟಿ ಕಾರ್ಯ ಆಗಲಿದೆ ಎಂದು ಅವರು ಮಾಹಿತಿ ನೀಡಿದರು. ಈ ಹಿಂದೆ 30 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಭತ್ತ ನಾಟಿ ಕಾರ್ಯ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು. ಕಳೆದ ಮಳೆಗಾಲದಲ್ಲಿ ಶೇ.38 ಕ್ಕಿಂತ ಹೆಚ್ಚು ಭತ್ತ ನಾಟಿ ಕಾರ್ಯ ಆಗಿತ್ತು. ಈಗ ಶೇ.8 ರಷ್ಟು ಮಾತ್ರ ಭತ್ತ ನಾಟಿ ಕಾರ್ಯ ಆಗಿದೆ. ಹಾಗೆಯೇ ಮುಸುಕಿನ ಜೋಳ ಬಿತ್ತನೆ ಕಾರ್ಯವು 1800 ಹೆಕ್ಟೆರ್ ಪ್ರದೇಶದಲ್ಲಿ ಆಗಬೇಕಿದ್ದು, ಶೇ.80 ರಷ್ಟು ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವ ಹಿನ್ನೆಲೆ ಅಲ್ಪಾವಧಿ ಮತ್ತು ಮಧ್ಯಮಾವಧಿ ಬೆಳೆ ಬೆಳೆಯಲು ಒತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಯೂರಿಯಾ, ಡಿಐಪಿ ಸೇರಿದಂತೆ ಅಗತ್ಯ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದ್ದು, ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಾಳುಮೆಣಸು, ಅಡಿಕೆ ಹಾಗೂ ಕಿತ್ತಳೆ ತೋಟಗಾರಿಕೆ ಬೆಳೆಗಳಿದ್ದು, ಕಾಳು ಮೆಣಸು ನಿಗಧಿತ ಅವಧಿಯಲ್ಲಿ ಮಳೆಯಾಗದ ಹಿನ್ನೆಲೆ ಬೆಳೆಗಳ ಬೆಳವಣಿಗೆ ಸಂಬಂಧಿಸಿದಂತೆ ವಿವರಿಸಿದರು. ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ ಅವರು ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ನೀಡಲಾಗುತ್ತಿದೆ. ರಾಸುಗಳಿಗೆ ಜಿಲ್ಲೆಯಲ್ಲಿ ಮೇವು ಕೊರತೆ ಇರುವುದಿಲ್ಲ ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು, ಪಂಚಾಯತ್ ರಾಜ್ ಎಂಜಿನಿಯರ್ ನಾಯಕ್, ಸೆಸ್ಕ್ ಎಂಜಿನಿಯರ್ ರಾಮಚಂದ್ರ ಹಾಗೂ ಶಾಲಾ ಶಿಕ್ಷಣಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು, ನಗರಾಭಿವೃದ್ಧಿ ಯೋಜನಾ ಇಲಾಖೆಯ ಯೋಜನಾ ನಿರ್ದೇಶಕರಾದ ಮಂಜುನಾಥ್ ರಾಮಣ್ಣ ಅವರು ತಮ್ಮ ಇಲಾಖೆಗೆ ಅಭಿವೃದ್ಧಿ ಕೆಲಸಗಳ ಸಂಬಂಧ ಮಾಹಿತಿ ನೀಡಿದರು. ಒಳಚರಂಡಿ ಮಂಡಳಿಯ ಎಇಇ ಪ್ರಸನ್ನ ಅವರು, ಕುಶಾಲನಗರ ಒಳಚರಂಡಿ ಕಾಮಗಾರಿ ಸಂಬಂಧಿಸಿದಂತೆ ಮಾಹಿತಿ ನೀಡಿದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ, ಮಡಿಕೇರಿಯಲ್ಲಿ ಒಳಚರಂಡಿ ಕಾಮಗಾರಿಯೂ ಅಪೂರ್ಣವಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಉಪ ವಿಭಾಧಿಕಾರಿ ನಿತಿನ್ ಚಕ್ಕಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು, ಹಾರಂಗಿ ಬಳಿಯ ಹುಲಸೆ ಗ್ರಾಮದ ಬಳಿಯ ಜಮೀನಿಗೆ ತೆರಳಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗೆ ನಿಗಧಿತ ಅವಧಿಯಲ್ಲಿ ಮಳೆಯಾಗದ ಹಿನ್ನೆಲೆ ಬೆಳೆ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.









