
ಮಡಿಕೇರಿ NEWS DESK ಆ.9 : ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಮಡಿಕೇರಿ ನಗರದಲ್ಲಿರುವ ರಾಜರ ಗದ್ದುಗೆ ಹಾಗೂ ಕೋಟೆಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಸ್ವಾಮೀಜಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಲವಾರು ಸ್ಮಾರಕಗಳನ್ನು ಸಂರಕ್ಷಿಸುತ್ತಾ ಬಂದಿದೆ. ರಾಜರ ಗದ್ದುಗೆಯಲ್ಲಿ ಒತ್ತುವರಿ ಸೇರಿದಂತೆ ಕೆಲವೊಂದು ಸಮಸ್ಯೆಗಳಿದ್ದು, ನ್ಯಾಯಾಲಯದಲ್ಲೂ ಪ್ರಕರಣ ನಡೆಯುತ್ತಿದೆ. ಆದ್ದರಿಂದ ನ್ಯಾಯಾಲಯದ ಆದೇಶ ಬರುವವರೆಗೂ ಗದ್ದುಗೆಗಳನ್ನು ಸಂರಕ್ಷಿಸುವ ಕಾರ್ಯಗಳನ್ನು ಕೈಗೊಳ್ಳುವಂತಾಗಬೇಕು. ಗದ್ದುಗೆ ಜೀರ್ಣೊದ್ಧಾರ ಸಂಬಂಧ ಶಾಸಕ ಮಂತರ್ ಗೌಡ ಅವರು ಜವಾಬ್ದಾರಿ ತೆಗೆದುಕೊಳ್ಳುವ ಭರವಸೆ ನೀಡಿದ್ದು ಆದಷ್ಟು ಶೀಘ್ರವಾಗಿ ಗದ್ದುಗೆ ಜೀರ್ಣೋದ್ಧಾರ ಕಾರ್ಯ ನಡೆಯುವಂತಾಗಲಿ ಎಂದು ಸುತ್ತೂರು ಶ್ರೀಗಳು ಹೇಳಿದರು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ ಕೋಟೆ ಹಾಗೂ ಗದ್ದುಗೆಯ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಬೇಕಿದೆ. ಕೋಟೆಗೆ ಅಗತ್ಯ ಸೌಲಭ್ಯ ಒದಗಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸ್ಮಾರಕ ಜಾಗ ಒತ್ತುವರಿ ತೆರವು ಸಂಬಂಧ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಜೆ.ಎಸ್.ವಿರೂಪಾಕ್ಷಯ್ಯ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಭ ಶಿವಯ್ಯ, ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್, ತಹಶೀಲ್ದಾರ್ ಶ್ರೀಧರ್, ಮ್ಯೂಸಿಯಂನ ಕ್ಯೂರೇಟರ್ ರೇಖಾ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಮತ್ತಿತರರು ಹಾಜರಿದ್ದರು.









