
ಮಡಿಕೇರಿ ಆ.10 NEWS DESK : ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮಡಿಕೇರಿ ತಾಲ್ಲೂಕು ಘಟಕದ ಸಾಮಾನ್ಯ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಗರದ ಉಡುಪಿ ಗಾರ್ಡನ್ ಪಾರ್ಟಿ ಹಾಲ್‌ನಲ್ಲಿ ನಡೆಯಿತು. ಕರವೇ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪ್ರವೀಣ್ ಡಿಂಗ ಅವರ ಅಧ್ಯಕ್ಷತೆಯಲ್ಲಿ, ರಾಜ್ಯ ಮಹಿಳಾ ಸಂಚಾಲಕಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ದೀಪಾ ಪೂಜಾರಿ ಅವರ ಸೂಚನೆಯಂತೆ ಸಭೆ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲಾ ಸಂಚಾಲಕ ಗೋವಿಂದರಾಜ್ ದಾಸ್ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಕುದುಪಜೆ ಅವರು ಸಂಘಟನೆ ನಡೆದು ಬಂದ ಹಾದಿ ಹಾಗೂ ಇದುವರೆಗೆ ಕೈಗೊಂಡಿರುವ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮುನೀರ್ ಮಾಚಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. :: ನೂತನ ಪದಾಧಿಕಾರಿಗಳ ಆಯ್ಕೆ :: ಸಭೆಯಲ್ಲಿ ಕರವೇ ಮಡಿಕೇರಿ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರವೀಣ್ ಡಿಂಗ ಅಧ್ಯಕ್ಷರಾಗಿ, ರಘು ಹಾಗೂ ಸಿಯಾಬುದ್ದೀನ್ ಉಪಾಧ್ಯಕ್ಷರಾಗಿ, ಜಯಪ್ರಕಾಶ್ ಪ್ರಧಾನ ಕಾರ್ಯದರ್ಶಿಯಾಗಿ, ಶರೀಫ್ ಗೌರವಾಧ್ಯಕ್ಷರಾಗಿ, ಪಿ.ಎ. ಜೋಸ್ ಸಂಚಾಲಕರಾಗಿ, ಫೈಯಾಜ್ ನಗರ ಅಧ್ಯಕ್ಷರಾಗಿ ಆಯ್ಕೆಯಾದರು. ಮಹಿಳಾ ಘಟಕದಲ್ಲಿ ನನೂತ ಉಪಾಧ್ಯಕ್ಷರಾಗಿ, ಶಿಲ್ಪ ಪ್ರಧಾನ ಕಾರ್ಯದರ್ಶಿಯಾಗಿ, ಸರಿತಾ ಸಂಚಾಲಕರಾಗಿ, ಹೇಮಲತಾ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ದೀಪ್ತಿ ಕಾರ್ಮಿಕ ಘಟಕದ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದರು. ಸಭೆಯಲ್ಲಿ ಸಂಘಟನೆಯ ಬಲವರ್ಧನೆ, ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ಕನ್ನಡ ನಾಡು, ನುಡಿ, ನೆಲ-ಜಲದ ಪರವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಕರವೇ ಕೊಡಗು ಜಿಲ್ಲಾ ಹಾಗೂ ಮಡಿಕೇರಿ ತಾಲ್ಲೂಕು ಘಟಕದ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.










