
ಮಡಿಕೇರಿ ಆ.14 NEWS DESK : ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಗದ್ದೆಯಲ್ಲಿ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಕೊಡಗು ಜಾನಪದ ಪರಿಷತ್ ಸಹಯೋಗದೊಂದಿಗೆ ನಾಟಿ ನೆಡುವ ಕಾರ್ಯಕ್ರಮ ನಡೆಯಿತು. ಓಂಕಾರೇಶ್ವರನಿಗೆ ಹಾಗೂ ಭೂಮಿತಾಯಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ನಾಟಿ ನೆಡಲಾಯಿತು. ಈ ವೇಳೆ ಮಾತನಾಡಿದ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಓಂಕಾರೇಶ್ವರ ಸನ್ನಿಧಿಯ ಗದ್ದೆಯಲ್ಲಿ ಹುತ್ತರಿ ಪ್ರಯುಕ್ತ ಪೂರ್ವ ಭಾವಿಯಾಗಿ ನಾಟಿ ನೆಡುವ ಕಾರ್ಯವನ್ನು ಸಾಂಪ್ರದಾಯಿಕವಾಗಿ ಮಾಡುತ್ತಾ ಬರಲಾಗಿದ್ದು, ಇದರಲ್ಲಿ ವಿವಿಧ ಸಂಘಸಂಸ್ಥೆಗಳು ಪಾಲ್ಗೊಳ್ಳುತ್ತಿವೆ ಎಂದರು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತ ಶಯನ ಮಾತನಾಡಿ, ಭೂಮಿಯ ಆರಾಧನೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಭೂಮಿ ತಾಯಿಯನ್ನು ಭಕ್ತಿಯಿಂದ ಪೂಜಿಸಿದರೆ ಆಕೆ ಸಮೃದಿಯನ್ನು ನೀಡುತ್ತಾಳೆ ಎಂದರು. ಕೊಡಗು ಜಾನಪದ ಪರಿಷತ್ ಉಪಾಧ್ಯಕ್ಷೆ ಶೋಭಾ ಸುಬ್ಬಯ್ಯ ಪ್ರಾರ್ಥನಾ ಗೀತೆ ಹಾಡಿದರು. ಓಂಕಾರೇಶ್ವರ ದೇವಾಲಯ ಕಾರ್ಯ ನಿರ್ವಹಕಾಧಿಕಾರಿ ದೇವರಾಜ್, ಜಾನಪದ ಪರಿಷತ್ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಖಜಾಂಚಿ ಸಂಪತ್ ಕುಮಾರ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಸದಸ್ಯರಾದ ವೀಣಾಕ್ಷಿ, ಶಾಂತಿ ಅಚ್ಚಯ್ಯ, ರಂಜಿತ್ ಕವಲಪಾರ, ಪತ್ರಕರ್ತೆ ಪ್ರಜ್ಞಾ, ವೈದ್ಯೆ ಡಾ.ಅನುಶ್ರೀ, ಚಿರಂತನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್,ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಕೆ.ಪಿ.ವಾಸು, ಬಾಳೆಯಡ ಶ್ರೀನಿವಾಸ್, ಅಂಬೆಕಲ್ ನವೀನ್,ಅಂಬೆಕಲ್ ವಿನೋದ್, ಶುಭ, ದೇವಾಲಯ ಸಿಬ್ಬಂದಿ ಕುಶ,ರಜತ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.








