ಮಿಯಾಮಿ (ಅಮೆರಿಕ)/ಬೆಂಗಳೂರು NEWS DESK, ಆ.25 : ಕೃತಕ ಬುದ್ಧಿಮತ್ತೆ, ಡಿಜಿಟಲ್ ಫೊರೆನ್ಸಿಕ್ಸ್, ರೋಬೋಟಿಕ್ಸ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಪ್ರವರ್ತಕ ಸಂಶೋಧಕರಾದ ಪ್ರೊ. ಎಸ್. ಎಸ್. ಅಯ್ಯಂಗಾರ್ ಅವರನ್ನು ಫ್ಲೋರಿಡಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯ (FIU) ‘President’s Council Outstanding Faculty Award – 2026’ಗೆ ಆಯ್ಕೆ ಮಾಡಲಾಗಿದೆ. ಸಂಶೋಧನೆ, ಬೋಧನೆ, ಮಾರ್ಗದರ್ಶನ ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರೊ. ಅಯ್ಯಂಗಾರ್ ಅವರ ಸಾಧನೆಗಳು FIUನ ಶ್ರೇಷ್ಠತೆ, ನಾವೀನ್ಯತೆ ಮತ್ತು ಪ್ರಭಾವವನ್ನು ಪ್ರತಿನಿಧಿಸುತ್ತವೆ ಎಂದು ವಿಶ್ವವಿದ್ಯಾಲಯದ President’s Council ತಿಳಿಸಿದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಪರಿವರ್ತನೆಗೆ ಕಾರಣವಾದ ಅವರ ಕಾರ್ಯವನ್ನೂ ಪ್ರಶಸ್ತಿಯ ಆಯ್ಕೆಯಲ್ಲಿ ಗುರುತಿಸಲಾಗಿದೆ. FIU ನ Knight Foundation School of Computing and Information Sciences ನಲ್ಲಿ ನಿರ್ದೇಶಕರು ಮತ್ತು ಪ್ರಾಧ್ಯಾಪಕರಾಗಿರುವ ಪ್ರೊ. ಅಯ್ಯಂಗಾರ್, ಹಲವು ದಶಕಗಳಿಂದ ಕಂಪ್ಯೂಟರ್ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಫೊರೆನ್ಸಿಕ್ಸ್, ಸೆನ್ಸರ್ ನೆಟ್‌ವರ್ಕ್, ಸೆನ್ಸರ್ ಫ್ಯೂಷನ್, ರೋಬೋಟಿಕ್ಸ್ ಮತ್ತು ಸೈಬರ್ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಇತ್ತೀಚಿನ ಅವಧಿಯಲ್ಲಿ ಪ್ರೊ. ಅಯ್ಯಂಗಾರ್ ಅವರಿಗೆ ದೊರೆತ ಎರಡನೇ ಪ್ರಮುಖ ಗೌರವ ಇದಾಗಿದೆ. 2026ರ Florida Inventors Hall of Fame ಪ್ರಶಸ್ತಿಗೂ ಅವರು ಆಯ್ಕೆಯಾಗಿದ್ದಾರೆ. ಆವಿಷ್ಕಾರ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಸಾಧಕರನ್ನು ಗುರುತಿಸುವ ಈ ಗೌರವಕ್ಕೆ ಅಯ್ಯಂಗಾರ್ ಆಯ್ಕೆಯಾಗಿರುವುದು ಅವರ ಸುದೀರ್ಘ ವೈಜ್ಞಾನಿಕ ಸಾಧನೆಗೆ ಸಂದ ಮತ್ತೊಂದು ಮನ್ನಣೆಯಾಗಿದೆ. ಅವರ ಸಾಧನೆಯ ವ್ಯಾಪ್ತಿ ಎಷ್ಟಿದೆ ಎಂಬುದಕ್ಕೆ ಅವರ ಸಂಶೋಧನಾ ಬದುಕೇ ಸಾಕ್ಷಿ. 600ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, 30ಕ್ಕೂ ಹೆಚ್ಚು ಪುಸ್ತಕಗಳು, 65ಕ್ಕೂ ಹೆಚ್ಚು ಪಿಎಚ್.ಡಿ. ಸಂಶೋಧಕರಿಗೆ ಮಾರ್ಗದರ್ಶನ, AI, ಸೆನ್ಸರ್ ಫ್ಯೂಷನ್, ರೋಬೋಟಿಕ್ಸ್, ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಫೊರೆನ್ಸಿಕ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಕೊಡುಗೆ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಕನ್ನಡದಲ್ಲಿ ಎಐ ಜ್ಞಾನ ವಿಸ್ತರಣೆಗೆ ಸಹಯೋಗ ಪ್ರೊ. ಅಯ್ಯಂಗಾರ್ ಅವರ ಸಾಧನೆ ಕುರಿತು ಪ್ರತಿಕ್ರಿಯಿಸಿದ ಪರ್ತಕರ್ತ ಮತ್ತು ಎಐ ಕುರಿತ ಬರಹಗಾರ ಡಾ. ರಮೇಶ್ ನಿಂಬೆಮರದಳ್ಳಿ ಅವರು, ‘ಕನ್ನಡದಲ್ಲಿ ಎಐ ಜ್ಞಾನವನ್ನು ವಿಸ್ತರಿಸುವ ಪ್ರಯತ್ನದಲ್ಲಿಯೂ ಪ್ರೊ. ಅಯ್ಯಂಗಾರ್ ಕೈಜೋಡಿಸಿರುವುದು ವಿಶೇಷವಾಗಿದೆ,’ ಎಂದಿದ್ದಾರೆ. “ಪ್ರೊ. ಎಸ್. ಎಸ್. ಅಯ್ಯಂಗಾರ್ ಅವರಂತಹ ಜಾಗತಿಕ ವಿಜ್ಞಾನಿ ಕನ್ನಡದಲ್ಲಿ ನಾನು ಬರೆದಿರುವ ಎಐ ಕೃತಿಯಲ್ಲಿ ನನ್ನೊಂದಿಗೆ ಸಹಲೇಖಕರಾಗಿರುವುದು ನನಗೆ ದೊರೆತ ಅಪರೂಪದ ಗೌರವ. ಎಐ ಮತ್ತು ಡಿಜಿಟಲ್ ಫೊರೆನ್ಸಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿದ ವಿಜ್ಞಾನಿಯೊಬ್ಬರು ಕನ್ನಡದಲ್ಲಿ ಎಐ ಜ್ಞಾನವನ್ನು ಕಟ್ಟಿಕೊಡುವ ಪ್ರಯತ್ನದ ಭಾಗವಾಗಿರುವುದು ಇಡೀ ಕನ್ನಡಿಗರು ಹೆಮ್ಮೆಪಡಬಹುದಾದ ಸಂಗತಿ. ಅವರ Iyengar Educational and Medical Foundation ಜೊತೆಗೂಡಿ ಕರ್ನಾಟಕದಲ್ಲಿ, ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳು, ಗ್ರಾಮೀಣ ವಿದ್ಯಾರ್ಥಿಗಳು, ಯುವಜನರು ಮತ್ತು ಸಾಮಾನ್ಯ ಜನರಲ್ಲಿ ಎಐ ಸಾಕ್ಷರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಯೋಗ ನಡೆಸುತ್ತಿದ್ದೇವೆ. ಎಐ ಜ್ಞಾನವನ್ನು ಕೆಲವೇ ತಂತ್ರಜ್ಞಾನ ಪರಿಣತರಿಗೆ ಸೀಮಿತಗೊಳಿಸದೆ ಸಾಮಾನ್ಯ ಕನ್ನಡಿಗರಿಗೂ ತಲುಪಿಸುವುದು ನಮ್ಮ ಉದ್ದೇಶ,” ಎಂದು ಅವರು ತಿಳಿಸಿದ್ದಾರೆ.








