ಸುಂಟಿಕೊಪ್ಪ, NEWS DESK ಸೆ. 4: ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಿದ್ದು, ಅದನ್ನು ತಡೆಹಿಡಿದಿರುವ ಹಾಗೂ ಪುನರ್‌ಪರಿಶೀಲನೆಗಾಗಿ ಉಪಸಮಿತಿ ರಚಿಸಿರುವುದನ್ನು ವಿರೋಧಿಸಿ ಸೆ. 8ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಹೇಳಿದರು.
ಶುಕ್ರವಾರ ಬೆಳಿಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಿವಿಧ ಪಂಚಾಯಿತಿ ನೌಕರರು ನಡೆಸಿದ ಸಾಂಕೇತಿಕ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, “ನಮ್ಮ ಬೇಡಿಕೆಯನ್ನು ಮನಗಂಡ ರಾಜ್ಯ ಸರ್ಕಾರವು ದಿನಾಂಕ 22-05-2026ರ ಅಧಿಸೂಚನೆಯಂತೆ ರೂ. 21,600 ಕನಿಷ್ಠ ವೇತನ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ವೇತನವನ್ನು ತಡೆಹಿಡಿದು, ಪುನರ್‌ಪರಿಶೀಲನೆಗಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸಿದೆ. ಈ ಉಪಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು. ವೇತನ ಸೇರಿದಂತೆ ಇತರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ನಿಟ್ಟಿನಲ್ಲಿ ಸೆ. 8ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ನಡೆದ ಧರಣಿಯಲ್ಲಿ ವಿಶ್ವ ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ್, ಸಣ್ಣ, ಚಂದ್ರಮಣಿ, ಕೊಡಗರಹಳ್ಳಿಯ ನೀರುಗಂಟಿ ಮಂಜ, ಪ್ರಕಾಶ್ ಸೇರಿದಂತೆ ಸುತ್ತಮುತ್ತಲಿನ ಪಂಚಾಯಿತಿಗಳ ನೌಕರರು ಪಾಲ್ಗೊಂಡಿದ್ದರು.







