ಕುಶಾಲನಗರ, NEWS DESK ಸೆ. 4: ಮಹಿಳೆಯರು ಸರ್ಕಾರದ ಹಾಗೂ ಸಂಘ-ಸಂಸ್ಥೆಗಳ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದರು.
ಅವರು ಕುಶಾಲನಗರ ಸಮೀಪದ ಗೊಂದಿ ಬಸವನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಶನೈಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ. ಶಿಕ್ಷಣ ಶಾಶ್ವತ ಆಸ್ತಿಯಾಗಿದ್ದು, ಅದರ ಮೂಲಕ ಜೀವನದ ಗುರಿಯನ್ನು ತಲುಪಲು ಸಾಧ್ಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದ ತಳಮಟ್ಟದ ಜನರಿಗೆ ಅಗತ್ಯವಿರುವ ಆರ್ಥಿಕ ಹಾಗೂ ಸಾಮಾಜಿಕ ಯೋಜನೆಗಳನ್ನು ತಲುಪಿಸುತ್ತಿರುವ ಬಗ್ಗೆ ಶಾಸಕರು ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಹಲವು ಯೋಜನೆಗಳು ಸಮಾಜದ ಬಹುತೇಕ ಜನರಿಗೆ ಸಹಕಾರಿಯಾಗುತ್ತಿದ್ದು, ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿರುವುದು ಸಂತಸ ತಂದಿದೆ ಎಂದರು.
ಯೋಜನೆಯಡಿ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು. ದೇವರ ಹೆಸರನ್ನು ಕೆಡಿಸುವವರ ಉದ್ಧಾರ ಅಸಾಧ್ಯ. ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಕೆಡಿಸಲು ಯತ್ನಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ರಂಜನ್ ಆಗ್ರಹಿಸಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರ ಬದುಕಿನ ಬಲವರ್ಧನೆ ಸಾಧ್ಯವಾಗಿದೆ. ಸಮಾಜ ನಿಂತ ನೀರಾಗಬಾರದು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದರು.
ಕ್ಷೇತ್ರದ ವಿವಿಧ ಯೋಜನೆಗಳ ಮೂಲಕ ಜನರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯಾನ್ ಮಾತನಾಡಿ, ಪ್ರತಿಯೊಬ್ಬರೂ ಸಂಸ್ಕಾರವಂತರಾಗಬೇಕು. ಪೂಜೆ-ಪುರಸ್ಕಾರಗಳ ಮೂಲಕ ಶಾಂತಿ ಹಾಗೂ ನೆಮ್ಮದಿ ಗಳಿಸಲು ಸಾಧ್ಯ. ಜಲಮೂಲಗಳ ಸಂರಕ್ಷಣೆ, ಪ್ರಕೃತಿಯ ಆರಾಧನೆ ಹಾಗೂ ಸಾಮಾಜಿಕ ಪ್ರಜ್ಞೆಯ ಮೂಲಕ ಪ್ರತಿಯೊಬ್ಬರೂ ಉತ್ತಮ ಬದುಕನ್ನು ರೂಪಿಸಿಕೊಳ್ಳುವಂತಾಗಬೇಕು ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮಹಿಳೆಯರು ಶಿಕ್ಷಣ ಹಾಗೂ ಆರ್ಥಿಕ ಸಬಲತೆ ಗಳಿಸುವುದರೊಂದಿಗೆ ಮಾನಸಿಕ ಸದೃಢತೆಯನ್ನು ಹೊಂದಬೇಕು. ಜೀವನದ ಮೌಲ್ಯಗಳು ಕಡಿಮೆಯಾದಲ್ಲಿ ಎಲ್ಲ ರಂಗಗಳ ಮೇಲೂ ಪರಿಣಾಮ ಬೀರುತ್ತದೆ. ಪರಸ್ಪರ ಪ್ರೀತಿ ಹಾಗೂ ವಿಶ್ವಾಸದ ಮೂಲಕ ಬದುಕು ರೂಪಿಸಿಕೊಂಡಲ್ಲಿ ನೆಮ್ಮದಿ ಕಾಣಬಹುದು ಎಂದರು.
ಪೂಜೆಗಳು ಶ್ರದ್ಧೆಯ ಪೂಜೆಯಾಗಬೇಕೇ ಹೊರತು ಆಡಂಬರದ ಪೂಜೆಯಾಗಬಾರದು. ನಾಡಿನ ಒಳಿತಿಗಾಗಿ ಪ್ರತಿಯೊಬ್ಬರೂ ಸಾಮೂಹಿಕವಾಗಿ ಪ್ರಾರ್ಥಿಸಬೇಕಾಗಿದೆ ಎಂದು ಶ್ರೀಗಳು ಹೇಳಿದರು.
ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷ ಎಂ.ಬಿ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಬಿ.ಜಿ. ಮಂಜುನಾಥ್, ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಸದಸ್ಯ ಎಂ.ಎನ್. ಚಂದ್ರಮೋಹನ್, ಪುರಸಭೆಯ ನಾಮನಿರ್ದೇಶಿತ ಸದಸ್ಯರಾದ ಎಂ.ಎಂ. ಪ್ರಕಾಶ್, ಬಿ.ಜಿ. ಜಗದೀಶ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಶನೈಶ್ವರ ದೇವಾಲಯದ ಅಧ್ಯಕ್ಷ ಜಿ.ಜಿ. ಮಂಜಪ್ಪ, ಉಪಾಧ್ಯಕ್ಷರಾದ ಮಂಜುಳಾ, ದಿವಾಕರ್, ಮಲ್ಲಿಗೆ, ತಿಮ್ಮಪ್ಪ, ಕಾರ್ಯದರ್ಶಿ ಪವಿತ್ರಾಕ್ಷಿ, ಕೋಶಾಧಿಕಾರಿ ಡಿ.ಎಸ್. ಹರೀಶ್, ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಪೂಜಾ ಸಮಿತಿ ಸದಸ್ಯರಾದ ಎಂ.ಕೆ. ದಿನೇಶ್, ಮಧುಕುಮಾರ್, ಡಿ.ಎಸ್. ಯೋಗೇಶ್, ದಿನೇಶ್ ಕುಮಾರ್, ಪಾರ್ವತಿ, ರಾಧಾ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ಅರ್ಚಕರಾದ ಕೆ. ಗೌಡಯ್ಯ ಹಾಗೂ ರಾಮ ನಾಯಕ ದಂಪತಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುಡ್ಡೆ ಹೊಸೂರು ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ವರಮಹಾಲಕ್ಷ್ಮಿ ಪೂಜಾ ಸಮಿತಿ, ಗುಡ್ಡೆ ಹೊಸೂರು ವಲಯ ಹಾಗೂ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸದಾಶಿವ ಸ್ವಾಮೀಜಿ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಮತ್ತಿತರರು ಗೊಂದಿ ಬಸವನಹಳ್ಳಿ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಶನೈಶ್ವರ ದೇವಾಲಯಕ್ಕೆ ತೆರಳಿದರು.






