
ಬೆಂಗಳೂರು, ಸೆ.4 NEWS DESK : ರಾಜ್ಯದ ಯುವಶಕ್ತಿಯನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಭಾರತ್ ಜೋಡೋ’ ಕುರಿತು ಕಲಾವಿದರಿಂದ ರೂಪಗೊಂಡ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಪ್ಪಿರುವ ಲೋಗೊವನ್ನು ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ಅವರು ಇಂದು ಬಿಡುಗಡೆ ಮಾಡಿದರು. ರಾಜ್ಯದ ಯುವಜನರನ್ನು ಒಂದೆಡೆ ಸೇರಿಸಿ, ಒಗ್ಗಟ್ಟು, ಸಾಮಾಜಿಕ ಸೌಹಾರ್ದತೆ, ಜವಾಬ್ದಾರಿಯುತ ಪೌರತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡ ಒಂದು ಪ್ರಮುಖ ಯೋಜನೆ ಇದಾಗಿದೆ. ಈ ಪ್ರಮುಖ ಯೋಜನೆಗೆ ಒಂದು ವಿಶಿಷ್ಟ ಗುರುತನ್ನು ನೀಡುವ ನಿಟ್ಟಿನಲ್ಲಿ, ‘ಭಾರತ್ ಜೋಡೋ’ ಲಾಂಛನವನ್ನು (Logo) ವಿನ್ಯಾಸಗೊಳಿಸಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರ್ನಾಟಕದಾದ್ಯಂತ ಒಟ್ಟು 255 ಲಾಂಛನ ವಿನ್ಯಾಸಗಳು ಸ್ವೀಕೃತವಾಗಿದ್ದವು. ಸಲ್ಲಿಕೆಯಾದ ವಿನ್ಯಾಸಗಳನ್ನು ಪರಿಶೀಲಿಸಿ, ಆಯ್ಕೆ ಪ್ರಕ್ರಿಯೆಯು ನಿಷ್ಪಕ್ಷಪಾತವಾಗಿ ಹಾಗೂ ವೃತ್ತಿಪರವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ‘ಕರ್ನಾಟಕ ಚಿತ್ರಕಲಾ ಪರಿಷತ್’ಗೆ ಈ ಜವಾಬ್ದಾರಿಯನ್ನು ವಹಿಸಲಾಗಿತ್ತು. ವಿವರವಾದ ಮೌಲ್ಯಮಾಪನದ ನಂತರ, ಎರಡು ಲಾಂಛನಗಳನ್ನು ಅಂತಿಮಗೊಳಿಸಿ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಪರಮೇಶ್ವರ್ ಅವರ ಅಂತಿಮ ಅನುಮೋದನೆಗೆ ಸಲ್ಲಿಸಲಾಯಿತು. ಇಂದು ಅನಾವರಣಗೊಂಡ ಅಂತಿಮ ‘ಭಾರತ್ ಜೋಡೋ’ ಲಾಂಛನವು, ಆಯ್ಕೆಯಾದ ಎರಡೂ ವಿನ್ಯಾಸಗಳ ಪ್ರಮುಖ ಅಂಶಗಳು ಮತ್ತು ಆಲೋಚನೆಗಳ ಸೃಜನಶೀಲ ಸಮ್ಮಿಲನವಾಗಿದ್ದು, ಕಾರ್ಯಕ್ರಮಕ್ಕೆ ಅತ್ಯಂತ ಅರ್ಥಪೂರ್ಣ ಹಾಗೂ ವಿಶಿಷ್ಟವಾದ ದೃಶ್ಯ ಗುರುತನ್ನು (Visual Identity) ಒದಗಿಸಿದೆ. ಹೊಸ ‘ಭಾರತ್ ಜೋಡೋ’ ಲಾಂಛನವನ್ನು ಇಂದು ಉಪ ಮುಖ್ಯಮಂತ್ರಿಗಳಾದ ಶ್ರೀ ಪರಮೇಶ್ವರ್ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು. ಈ ಯೋಜನೆಯಡಿ ಯುವಕರನ್ನು ಆಕರ್ಷಿಸಲು ಲೋಗೊ ಒಂದು ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಕರ್ನಾಟಕದಾದ್ಯಂತ ಯುವಜನರ ಚಟುವಟಿಕೆಗಳಿಗೆ ಒಂದು ವಿಶಿಷ್ಟ ಗೌರವವನ್ನು ತಂದುಕೊಟ್ಟಿದೆ. ಈ ಲಾಂಛನವು ಒಗ್ಗಟ್ಟು, ಸಹಬಾಳ್ವೆ, ಯುವಜನರ ಭಾಗವಹಿಸುವಿಕೆ ಹಾಗೂ ಕರ್ನಾಟಕದ ಜನರ ಸಾಮೂಹಿಕ ಶಕ್ತಿಯ ಸಂಕೇತವಾಗಿದ್ದು, ‘ಭಾರತ್ ಜೋಡೋ’ ಕಾರ್ಯಕ್ರಮದ ಮೂಲ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಾದ ಎಮ್.ಎನ್.ಅನುಚೇತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









