ಮಡಿಕೇರಿ NEWS DESK ಅ.22 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ. ದಶಮಂಟಪಗಳ ಶೋಭಾಯಾತ್ರೆಯಲ್ಲಿ ಶ್ರೀ ಕರವಲೆ ಭಗವತಿ ದೇವಾಲಯದ ಮಂಟಪಕ್ಕೆ ಪ್ರಥಮ ಬಹುಮಾನ ದೊರೆತ್ತಿದೆ. ‘ಕಾಳಿಂಗ ಮರ್ದನ’ ಕಥಾ ಸಾರಾಂಶವನ್ನು ಹೊಂದಿದ್ದ ಶ್ರೀ ಕರವಲೆ ಭಗವತಿ ದೇವಾಲಯದ ಮಂಟಪ ಜನ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ತಿಕೇಯನಿಂದ ತಾರಕಾಸುರ ಸೋದರರ ಸಂಹಾರದ ಕಥಾ ಸಾರಾಂಶ ಹೊಂದಿದ್ದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಮಂಟಪ ದ್ವಿತೀಯ ಹಾಗೂ ಧೂಮ್ರವರ್ಣನಿಂದ ಧೂಮ್ರಾಕ್ಷ ಸಂಹಾರದ ಕಥಾ ಸಾರಾಂಶ ಹೊಂದಿದ್ದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಮಂಟಪ ತೃತೀಯ ಬಹುಮಾನ ಪಡೆಯಿತು. ನಗರದ ನಾಲ್ಕು ಶಕ್ತಿ ದೇವತೆಗಳಾದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಯದ ಕರಗಗಳು ರಾತ್ರಿ ನಗರ ಸಂಚಾರ ಮಾಡಿ ಮುಂಜಾನೆ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಸಂಪನ್ನಗೊಂಡಿತು. ಮಡಿಕೇರಿ ದಸರಾವನ್ನು ವೀಕ್ಷಿಸಲು ಜನ ಸಾಗರವೇ ಹರಿದು ಬಂದಿತ್ತು. ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸರು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾದರು.










































