ಮಡಿಕೇರಿ NEWS DESK ಅ.26 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದ ಪ್ರಧಾನಮಂತ್ರಿಯವರ ಬಗ್ಗೆ ಮಾತನಾಡುವಾಗ ರಾಜಕೀಯ ನಾಯಕರು ತಮ್ಮ ಮಾತುಗಳಲ್ಲಿ ಸಂಯಮ ಮತ್ತು ಜವಾಬ್ದಾರಿಯನ್ನು ಕಾಯ್ದುಕೊಳ್ಳಬೇಕು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ವಿಚಾರಗಳಿಗೆ ಕೊಂಡೊಯ್ಯದೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ರಾಜಕೀಯದಲ್ಲಿ ಟೀಕೆಗಳು ಸಹಜವಾದರೂ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ದೇಶದ ಪ್ರಧಾನಿಯ ತಂದೆಯವರ ಕುರಿತು ಅಗೌರವದ ಹೇಳಿಕೆ ನೀಡುವ ಮೂಲಕ ತನ್ನ ಸಿದ್ಧಾಂತವನ್ನು ಸಾಕ್ಷೀಕರಿಸಿದೆ. ಈ ಹಿಂದೆ ಮೋದಿ ಅವರ ತಾಯಿಯ ಬಗ್ಗೆ ಕೂಡ ಇದೇ ಪಕ್ಷ ಮಾತನಾಡಿತ್ತು ಎಂದು ಟೀಕಿಸಿದ್ದಾರೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಜನರಿಂದ ತಿರಸ್ಕೃತಗೊಂಡು ಎಲ್ಲಾ ಚುನಾವಣೆಗಳಲ್ಲಿ ಹೀನಾಯ ಸೋಲನ್ನು ಅನುಭವಿಸುತ್ತಿದೆ. ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಾಯಕತ್ವದ ವೈಫಲ್ಯವನ್ನು ಮುಚ್ಚಿ ಹಾಕಲು ಪ್ರಧಾನಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಡೀ ವಿಶ್ವವೇ ಮೆಚ್ಚಿರುವ ನಾಯಕ ಮೋದಿ ಅವರು ಜನರಿಂದ ಬಹುಮತ ಪಡೆದ ದಕ್ಷ ಆಡಳಿತಗಾರರಾಗಿದ್ದಾರೆ. ಖರ್ಗೆ ಅವರ ಹೇಳಿಕೆಯನ್ನು ಕೇವಲ ಬಿಜೆಪಿ ಮಾತ್ರವಲ್ಲ ದೇಶದ ಜನರೇ ಪಕ್ಷಾತೀತವಾಗಿ ಖಂಡಿಸುತ್ತಿದ್ದಾರೆ ಎಂದು ಕಂಠಿ ಕಾರ್ಯಪ್ಪ ತಿಳಿಸಿದ್ದಾರೆ.

















