ಮಡಿಕೇರಿ, NEWS DESK ನ.12: ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹಲವು ಜೀವಗಳಿಗೆ ಮರುಜೀವ ನೀಡಿದ 22 ವರ್ಷದ ಯುವಕ ಯೋಗೇಶ್ ಅವರ ನಿವಾಸಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ, ದುಃಖತಪ್ತ ಪೋಷಕರಿಗೆ ಸಾಂತ್ವನ ಹೇಳಿದರು.
ಇಂದು ಸಂಜೆ ಮಡಿಕೇರಿಗೆ ಆಗಮಿಸಿದ ಶಾಸಕರು, ತಕ್ಷಣವೇ ಯೋಗೇಶ್ ಅವರ ಮನೆಗೆ ತೆರಳಿ ಪೋಷಕರನ್ನು ಭೇಟಿಯಾಗಿ ಕುಟುಂಬದ ದುಃಖದಲ್ಲಿ ಭಾಗಿಯಾದರು.
ಕಿರಿಯ ವಯಸ್ಸಿನಲ್ಲಿಯೇ ಅಂಗಾಂಗ ದಾನದ ಮೂಲಕ ಹಲವು ಜೀವಗಳಿಗೆ ಹೊಸ ಬದುಕು ನೀಡಿದ ಯೋಗೇಶ್ ಅವರ ಕಾರ್ಯ ಅತ್ಯಂತ ಶ್ರೇಷ್ಠವಾದ ಮಾನವೀಯ ಸೇವೆಯಾಗಿದೆ. ಅವರ ಈ ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಿದ್ದು, ಅವರ ಕಾರ್ಯ ಸದಾ ಸ್ಮರಣೀಯವಾಗಿರಲಿದೆ ಎಂದು ಹೇಳಿ ಶಾಸಕರು ಕುಟುಂಬದವರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಎಚ್.ಎ., ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮೂಡ ಸದಸ್ಯರಾದ ಚಂದ್ರಶೇಖರ್ ಆರ್.ಪಿ. ಮತ್ತು ಮಿನಾಜ್ ಪ್ರವೀಣ್, ಪ್ರಚಾರ ಸಮಿತಿ ಬ್ಲಾಕ್ ಅಧ್ಯಕ್ಷ ವಿ.ಜಿ. ಮೋಹನ್, ಸದಾ ಮುದ್ದಪ್ಪ, ಮಾಜಿ ನಗರಸಭಾ ಅಧ್ಯಕ್ಷೆ ಜುಲೆಕಾಬಿ, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿ, ಕಾಂಗ್ರೆಸ್ ಮುಖಂಡ ಅಂಬೆಕಲ್ ನವೀನ್, ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್, ನಗರ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಹರಿಣಾಕ್ಷಿ ಸೇರಿದಂತೆ ನಿರಂಜನ್, ಪ್ರತಾಪ್, ಸುಬ್ರಮಣಿ, ಕೀರ್ತನ್, ಪೊನ್ನು, ಪವಿತ್ರ, ಶೇಕ್ ಅಹಮದ್ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.























