
ಮಡಿಕೇರಿ ಏ.24 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೌಡರು ಕೊಡಗು ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಅರಿತಿದ್ದು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ ಹೊಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇವರ ಗೆಲುವು ನಿಶ್ಚಿತವಾಗಿದೆ ಎಂದು ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜನಸಾಮಾನ್ಯರೊಂದಿಗೆ ಬೆರೆತು ಕಷ್ಟಗಳನ್ನು ಅರಿಯುವ ಮತ್ತು ಸುಲಭವಾಗಿ ಸಿಗಬಲ್ಲ ಸಂಸದರೊಬ್ಬರು ಕೊಡಗು ಜಿಲ್ಲೆಗೆ ಬೇಕಾಗಿದ್ದಾರೆ. ಈ ಗುಣವನ್ನು ಜಿಲ್ಲೆಯ ಜನ ಲಕ್ಷ್ಮಣ್ ವರಲ್ಲಿ ಕಂಡಿದ್ದಾರೆ, ಆದ್ದರಿಂದ ಅತ್ಯಧಿಕ ಮತಗಳು ಅವರ ಪಾಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಲಕ್ಷ್ಮಣ್ ಅವರು ಕೊಡಗಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಇಬ್ಬರು ಶಾಸಕರೊಂದಿಗೆ ಸಮನ್ವಯತೆಯನ್ನು ಕಾಯ್ದುಕೊಂಡಿದ್ದು, ಸಂಸದರಾಗಿ ಆಯ್ಕೆಯಾದರೆ ಜಿಲ್ಲೆ ಮತ್ತಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿ, ಸಮಾಜಮುಖಿಯಾಗಿ, ಜನಸಾಮಾನ್ಯರ ಪರ ನಿರಂತರ ಹೋರಾಟ ನಡೆಸುತ್ತಲೇ ಬಂದಿರುವ ಲಕ್ಷ್ಮಣ್ ಅವರು ಕೊಡಗು ಜಿಲ್ಲೆ ಸಂಕಷ್ಟಕ್ಕೆ ಸಿಲುಕಿದಾಗಲೂ ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ಮತ್ತು ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಜನರ ಧ್ವನಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿರುವ ಲಕ್ಷ್ಮಣ್ ಅವರ ಗೆಲುವು ಕೊಡಗಿಗೆ ಅನಿವಾರ್ಯವಾಗಿದೆ. ಅಭಿವೃದ್ಧಿಪರ ಚಿಂತನೆಯ ಶಾಸಕದ್ವಯರೊಂದಿಗೆ ಕೈಜೋಡಿಸಿ ಮುನ್ನಡೆಯಲು ಸಹಕಾರಿಯಾಗಲಿದೆ. ಇದನ್ನು ಜಿಲ್ಲೆಯ ಪ್ರಜ್ಞಾವಂತ ಮತದಾರರು ಅರಿತಿದ್ದು, ಫಲಿತಾಂಶ ಲಕ್ಷ್ಮಣ್ ಅವರ ಪರ ಇರಲಿದೆ ಎಂದು ರಮಾನಾಥ್ ತಿಳಿಸಿದ್ದಾರೆ.









