
ಮಡಿಕೇರಿ ಏ.24 NEWS DESK : ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ನಡೆದ ಅಪಘಾತದ ಪ್ರಕರಣದ ವಿಚಾರದಲ್ಲಿ ಮಡಿಕೇರಿ ಕ್ಷೇತ್ರದಸ ಶಾಸಕರ ಹೆಸರನ್ನು ಎಳೆದು ತರುವ ಮೂಲಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ದುರುದ್ದೇಶಪೂರಿತ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್ ಸುಂಟಿಕೊಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗದ್ದೆಹಳ್ಳದಲ್ಲಿ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಪೊಲೀಸರು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆಯೇ ಹೊರತು ಯಾವುದೇ ರೀತಿಯಲ್ಲಿ ಕರ್ತವ್ಯಲೋಪ ಮಾಡಿಲ್ಲ. ಮಡಿಕೇರಿ ಶಾಸಕರು ಕಾನೂನು ಏನು ಹೇಳುತ್ತದೆ ಅದನ್ನು ಮಾಡಿ ಎಂದು ಕಾನೂನಿಗೆ ಗೌರವ ನೀಡಿ ಮಾತನಾಡಿದ್ದಾರೆಯೇ ಹೊರತು ಎಲ್ಲೂ ತಪ್ಪಾಗಿ ನಡೆದುಕೊಂಡಿಲ್ಲವೆಂದು ಸ್ಪಷ್ಟಪಡಿಸಿದರು.
ಪ್ರತಿ ಚುನಾವಣೆ ಸಂದರ್ಭ ಎಸ್‌ಡಿಪಿಐ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಅಪಘಾತ ನಡೆದ ಸಂದರ್ಭ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳಾದ ನಮಗೆ ಸತ್ಯ ಏನು ಎನ್ನುವುದು ತಿಳಿದಿದೆ. ವಿನಾಕಾರಣ ಪ್ರಚಾರಕ್ಕಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಉಸ್ಮಾನ್ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಸಂಶಯವಿದ್ದರೆ ತನಿಖೆಗೆ ಪೊಲೀಸ್ ಇಲಾಖೆ ಇದೆ, ತನಿಖೆ ನಡೆಸಿ ಉದ್ದೇಶಪೂರ್ವಕ ಅಪಘಾತವೆಂದು ಸಾಬೀತಾದರೆ ಶಿಕ್ಷೆ ನೀಡಲು ಕಾನೂನು ಇದೆ. ಇದರ ನಡುವೆ ಮಡಿಕೇರಿ ಶಾಸಕರನ್ನು ಎಳೆದು ತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ಅವರು, ಎಸ್‌ಡಿಪಿಐ ಕ್ಷÄಲ್ಲಕ ರಾಜಕಾರಣ ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.









