
ವಿರಾಜಪೇಟೆ ಏ.24 NEWS DESK : ಮೈಸೂರು ನಾರಾಯಣ ಆಸ್ಪತ್ರೆ ವತಿಯಿಂದ ವಿರಾಜಪೇಟೆಯ ಕ್ರೆಡೋ ಮೆಡಿಕಲ್ ಕೇಂದ್ರದಲ್ಲಿ 24*7 ಮೀಸಲಾದ ಆ್ಯಂಬುಲೆನ್ಸ್ ಸೇವೆಯೊಂದಿಗೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ಚಾಲನೆ ನೀಡಲಾಯಿತು.
ಮೈಸೂರಿನ ನಾರಾಯಣ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಸೇವೆಗಳು ಮತ್ತು ಕ್ಲಿನಿಕಲ್ ಅಲಯನ್ಸ್ನ ನಿರ್ದೇಶಕರಾದ ಡಾ. ವಿ.ಕೇಶವಮೂರ್ತಿ, ವಿರಾಜಪೇಟೆ ನಗರ ಠಾಣಾಧಿಕಾರಿ ರವೀಂದ್ರ, ಕ್ರೆಡೋ ಮೆಡಿಕಲ್ ಸೆಂಟರ್ನ ಡಾ. ಕಟ್ಟೇರ ಪೂಣಚ್ಚ ವೈದ್ಯಕೀಯ ಸೇವೆಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ನಾರಾಯಣ ಆಸ್ಪತ್ರೆಯ ಕಾರ್ಡಿಯಾಲಜಿ ಸೇವೆಗಳು ಮತ್ತು ಕ್ಲಿನಿಕಲ್ ಅಲಯನ್ಸ್ ನಿರ್ದೇಶಕ ಡಾ.ಕೇಶವಮೂರ್ತಿ, ವಿರಾಜಪೇಟೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗುವಂತೆ ಮಾಡುವ ನಮ್ಮ ಬದ್ಧತೆಯನ್ನು ಈ ಹೊಸ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಹೊಸದಾಗಿ ಪ್ರಾರಂಭಿಸಲಾದ ತುರ್ತು ವೈದ್ಯಕೀಯ ಸೇವಾ ಕೇಂದ್ರವು ಅಗತ್ಯ ತುರ್ತು ಸೇವೆಗಳನ್ನು ಒದಗಿಸುತ್ತದೆ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ 24/7 ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತದೆ, ಈ ಸೇವೆಯಿಂದ ಜೀವ ಉಳಿಸುವ ಚಿಕಿತ್ಸೆಗಳಿಗಾಗಿ ರೋಗಿಗಳು ಮೈಸೂರಿನ ನಾರಾಯಣ ಆಸ್ಪತ್ರೆಗೆ ಶೀಘ್ರದಲ್ಲಿ ತಲುಪಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ವಿರಾಜಪೇಟೆ ನರ್ಸಿಂಗ್ ಹೋಂನ ಡಾ. ಫಾತಿಮಾ ಕಾರ್ಯಪ್ಪ, ನಾರಾಯಣ ಆಸ್ಪತ್ರೆಯ ತುರ್ತು ಸೇವಾ ಸಲಹೆಗಾರ ಡಾ. ಅಶೋಕ್, ಕೊಡವ ಸಮಾಜದ ಅಧ್ಯಕ್ಷರಾದ ಕುಂಬೇರ ಮನು ಕುಮಾರ್ ಅಂಜಪರವಂಡ ಅನಿಲ್ ಮತ್ತು ರೋಟರಿ ಕ್ಲಬ್ ವಿರಾಜಪೇಟೆಯ ಪೃಥ್ವಿ ಮಾದಯ್ಯ ಹಾಜರಿದ್ದರು.








