
ಮಡಿಕೇರಿ ಏ.24 NEWS DESK : ಪ್ರತಿಷ್ಠಿತ ಮೈಸೂರು-ಕೊಡಗು ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ, ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ‘ರೋಡ್ ಶೋ’ ನಡೆಯಿತು. ಬಿಜೆಪಿಯ ತಾರಾ ಪ್ರಚಾರಕಿ ಸಿನಿಮಾ ನಟಿ ತಾರಾ ಅನುರಾಧ ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರು ಪಾಲ್ಗೊಂಡು ಬಿಜೆಪಿ ಪರ ಮತಯಾಚಿಸಿದರು.
ನಗರದ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯದುವೀರ್ ಅವರು ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರಗಳ ನಡುವೆ ರೋಡ್ ಶೋ ನಡೆಸಿದರು. ಶ್ರೀಚೌಡೇಶ್ವರಿ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ, ಮಹದೇವಪೇಟೆ, ಹಳೆಯ ಖಾಸಗಿ ಬಸ್ ನಿಲ್ದಾಣವನ್ನು ಹಾದು ಕೋಟೆಯ ಮುಖ್ಯ ಬೀದಿಗಳಲ್ಲಿ ಸಾಗಿತು.
ರೋಡ್ ಶೋ ಆರಂಭಕ್ಕೂ ಮೊದಲು ತಾರಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪರವಾಗಿ ರಾಜ್ಯ ಮತ್ತು ದೇಶದಲ್ಲಿ ಉತ್ತಮ ವಾತಾವರಣವಿದೆ. ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ್ ಅವರ ಬಗ್ಗೆ ಕ್ಷೇತ್ರದಾದ್ಯಂತ ಜನರ ಒಲವು ಕಂಡು ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಹಿಂದಿನಿಂದಲು ಮೈಸೂರು ರಾಜವಂಶಸ್ಥರು ಮತ್ತು ಜನರ ನಡುವೆ ಭಾವನಾತ್ಮಕ ಸಂಬಂಧವಿದ್ದು, ಈ ಬಾರಿ ಯದುವೀರ್‍ರಿಗೆ ಕ್ಷೇತ್ರದ ಜನತೆ ಆಶೀರ್ವದಿಸಲಿದ್ದಾರೆನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಯದುವೀರ್ ಮಾತನಾಡಿ, ಮೈಸೂರು ಮತ್ತು ಕೊಡಗು ವಿಭಾಗಗಳಲ್ಲಿ ಬಿಜೆಪಿ ಪರವಾದ ಒಲವು ಇದೆ ಎಂದರು.
ರೋಡ್ ಶೋದಲ್ಲಿ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂಎಲ್‍ಸಿ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಪಕ್ಷದ ಪ್ರಮುಖರಾದ ರೀನಾ ಪ್ರಕಾಶ್, ಮಹೇಶ್ ಜೈನಿ, ನೆಲ್ಲೀರ ಚಲನ್, ಬಿ.ಕೆ. ಅರುಣ್ ಕುಮಾರ್, ಬಿ.ಕೆ. ಜಗದೀಶ್, ಅಪ್ರು ರವೀಂದ್ರ, ಪಿ.ಡಿ. ಪೊನ್ನಪ್ಪ, ನಾಗೇಶ್ ಕುಂದಲ್ಪಾಡಿ, ಯಮುನಾ ಚಂಗಪ್ಪ, ಉಮೇಶ್ ಸುಬ್ರಮಣಿ, ಸಜಿಲ್ ಕೃಷ್ಣನ್, ತಳೂರು ಕಿಶೋರ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.








