
ಮಡಿಕೇರಿ ಏ.30 NEWS DESK : ಕೊಡಗು ಜಿಲ್ಲೆಯ ಅತಿ ಎತ್ತರದ ಬೆಟ್ಟ ಶ್ರೇಣಿಗಳಲ್ಲಿ ಮೂರನೇಯ ಸ್ಥಾನದಲ್ಲಿರುವ ಕೋಟೆಬೆಟ್ಟ ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ. ಬಿಸಿಲ ಬೇಗೆಗೆ ಅಂಜದೆ ಕೋಟೆಬೆಟ್ಟವನ್ನೇರಿದ ಪುಟಾಣಿ ಮಕ್ಕಳು ಪ್ರಕೃತಿಯ ಸೊಬಗನ್ನುಂಡು ಸಂಭ್ರಮಿಸಿದರು.
ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮ ವ್ಯಾಪ್ತಿಯ ಕೋಟೆಬೆಟ್ಟ ಇತಿಹಾಸ ಪ್ರಸಿದ್ಧ ಶ್ರೀಈಶ್ವರ ದೇವಾಲಯವಿರುವ ಪವಿತ್ರ ಕ್ಷೇತ್ರವಾಗಿದೆ. ಹಸಿರ ಸಾಲಿನ ಈ ಬೆಟ್ಟ ಚಾರಣಕ್ಕೂ ಹೆಸರುವಾಸಿಯಾಗಿದೆ.
ಮಡಿಕೇರಿಯ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದ ಅಂಗವಾಗಿ ಕೋಟೆಬೆಟ್ಟಕ್ಕೆ ಚಾರಣವನ್ನು ಆಯೋಜಿಸಲಾಗಿತ್ತು.
ಶಿಬಿರಾರ್ಥಿ ಪುಟಾಣಿಗಳು, ಪೋಷಕರು, ಶಿಕ್ಷಕರು, ಕ್ರೀಡಾಭಿಮಾನಿಗಳು ಹಾಗೂ ಆಯೋಜಕರು ಸೇರಿದಂತೆ ಸುಮಾರು 130ಕ್ಕೂ ಅಧಿಕ ಮಂದಿ ಚಾರಣದಲ್ಲಿ ಪಾಲ್ಗೊಂಡಿದ್ದರು. ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು ಬೆಟ್ಟವನ್ನೇರಿ ಸಂಭ್ರಮಿಸಿದರು. ಕಾಡಿನಲ್ಲಿ ದೊರಕುವ ಗೊಟ್ಟೆ ಹಣ್ಣು, ಈಚಲು ಹಣ್ಣು, ರ‍್ಗುಳಿ, ಚೂರಿ ಹಣ್ಣು ಮುಂತಾದ ಹಣ್ಣುಗಳ ಸವಿಯುಂಡರಲ್ಲದೆ ವಿವಿಧ ಗಿಡ, ಮರಗಳ ಪರಿಚಯ ಮಾಡಿಕೊಂಡರು. ಶಿಬಿರದ ಮೇಲುಸ್ತುವಾರಿ ವಹಿಸಿಕೊಂಡಿದ್ದ ತರಬೇತುದಾರರು ಮಕ್ಕಳಿಗೆ ಪ್ರಕೃತಿ ಮತ್ತು ಸಸ್ಯರಾಶಿಯ ಮಾಹಿತಿ ನೀಡಿದರು.
ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಶ್ಯಾಮ್ ಪೂಣಚ್ಚ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ ಅವರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಚಾರಣದಲ್ಲಿ ಪಾಲ್ಗೊಂಡಿದ್ದರು. ಆರೋಹಣ ತಂಡದ ಕೆ.ಕೆ.ಮಹೇಶ್ ಕುಮಾರ್ ಕ್ಷೇತ್ರದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರಲ್ಲದೆ, ಭಜನೆ ಕಾರ್ಯ ನಡೆಸಿಕೊಟ್ಟರು.
::: ಮೇ 1 ರಂದು ಸಮಾರೋಪ :::
ಏಪ್ರಿಲ್ ಒಂದರಿಂದ ಆರಂಭಗೊಂಡ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮೇ 1ರಂದು ನಡೆಯಲಿದೆ. ಬೆಳಿಗ್ಗೆ 8ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಚೆಪ್ಪುಡಿರ ಅಯ್ಯಪ್ಪ ಕಾರ್ಯಪ್ಪ, ರಾಷ್ಟ್ರೀಯ ಹಾಕಿ ಆಟಗಾರ ಬಿ.ಎಸ್.ಚೆಂಗಪ್ಪ ಉಪಸ್ಥಿತರಿರುವರು. ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷ ಕೋಟೇರ ಮುದ್ದಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಹಾಕಿ, ಅಥ್ಲೆಟಿಕ್, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ.








