
ಸುಂಟಿಕೊಪ್ಪ ಏ.30 NEWS DESK : ಸುಂಟಿಕೊಪ್ಪ ಸಮೀಪ 7ನೇ ಹೊಸಕೋಟೆಯಲ್ಲಿ ಸಂತ ಸಬಾಸ್ಟಿನ್ ಚರ್ಚ್ ನೂತನವಾಗಿ ನಿರ್ಮಾಣಗೊಂಡಿದೆ. ಚರ್ಚ್ ಗಳ ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಮಾರ್ ಲಾರೆನ್ಸ್ ಮುಕ್ಕಾಜಿ ಅವರು ಮಂಗಳವಾರ ನೂತನ ಚರ್ಚ್ ಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೇರವೇರಿಸಿ ಆಶೀರ್ವಚನ ನೀಡಿದರು. ಎಲ್ಲಾ ಧರ್ಮಗುರುಗಳ, ಕನ್ಯಾಸ್ತ್ರೀಯರ ಹಾಗೂ ಭಕ್ತರ ಸತತ ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಚರ್ಚ್ ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದೆ. ಸತತ ಪ್ರಾರ್ಥನೆ ಮತ್ತು ಆರಾಧನೆಯಿಂದ ಈ ದೇವಾಲಯವನ್ನು ಒಂದು ಶಕ್ತಿಯ ಶೃದ್ಧೆಯ ಕೇಂದ್ರವನ್ನಾಗಿ ಮಾಡಿ ಎಂದು ಕರೆ ನೀಡಿದರು.
ಬೆಳ್ತಂಗಡಿ ಧರ್ಮಕ್ಷೇತ್ರದ ಅಧೀನದಲ್ಲಿ ಬರುವ ಸಿದ್ಧಾಪುರ ಕರಡಿಗೋಡುವಿನ ಸಂತ ಮೇರಿ ದೇವಾಲಯದ ನೇತೃತ್ವದಲ್ಲಿ ಸಂತ ಸಬಾಸ್ಟಿನ್ ಅವರ ರೋಮನ್ ಕ್ಯಾಥೋಲಿಕ್ ದೇವಾಲಯ 1982 ರಲ್ಲಿ ಸ್ಥಾಪನೆಗೊಂಡಿತು. ಇದೀಗ ನೂತನ ಚರ್ಚ್ ಅತ್ಯುತ್ತಮ ರೀತಿಯಲ್ಲಿ ಪುನರ್ ನಿರ್ಮಾಣಗೊಂಡಿದೆ ಎಂದು ಅವರು ಶ್ಲಾಘಿಸಿದರು.
ಬೆಳ್ತಂಗಡಿ ಧರ್ಮಕ್ಷೇತ್ರದ ಜೋಸೆಫ್ ವಲಿಯಪರಂಬಿಲ್, ಸಿದ್ದಾಪುರ ಸಂತ ಮೇರಿ ಚರ್ಚಿನ ವಲಯ ಧರ್ಮಗುರುಗಳಾದ ಜೋಜಿ ವಡಕ್ಕಿವೀಟಿ, ಮೈಸೂರಿನ ಸೆಂಟ್ ಪೌಲಸ್ ಪ್ರಾಂತ್ಯದ ಧರ್ಮಗುರು ಆಗಸ್ಟೀನ್ ಪಾಯಂಪಳ್ಳಿ, ಕೊಡಗು ಸೇರಿದಂತೆ ಬೆಳ್ತಂಗಡಿ ಧರ್ಮಕೇಂದ್ರಗಳಿಂದ ಅಂದಾಜು 40 ಕ್ಕೂ ಹೆಚ್ಚು ಧರ್ಮಗುರುಗಳು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಕನ್ಯಾಸ್ತ್ರೀಯರು, ಹೊಸಕೋಟೆ, ಸುಂಟಿಕೊಪ್ಪ, ಕುಶಾಲನಗರ, ಮಡಿಕೇರಿ, ಸಿದ್ಧಾಪುರ ಸೇರಿದಂತೆ ವಿವಿಧ ಊರುಗಳ ನೂರಾರು ಭಕ್ತರು ಧಾರ್ಮಿಕ ಆಚರಣೆಗೆ ಸಾಕ್ಷಿಯಾದರು.










