
ಸೋಮವಾರಪೇಟೆ NEWS DESK : ಸುಳ್ಳು ಮೊಕದ್ದಮೆಗಳ ಮೂಲಕ ಬಿಜೆಪಿ ಕಾರ್ಯಕರ್ತರ ಮೇಲಿನ ಕಾಂಗ್ರೆಸ್ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ, ಜಿಲ್ಲಾ ವ್ಯಾಪಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಸೋಮವಾರಪೇಟೆ ಮಂಡಲದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಲ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರು ಕಾಂಗ್ರೆಸ್ ಧಮನಕಾರಿ ನೀತಿಗೆ ಮುಂದಾಗಿದೆ, ಇದಕ್ಕೆ ಬಿಜೆಪಿ ಕಾರ್ಯಕರ್ತರು ಮಣಿಯುವುದಿಲ್ಲ ಎಂದರು.
ಲೋಕಸಭಾ ಚುನಾವಣೆಯ ಮತದಾನದ ದಿನದಂದು ಶನಿವಾರಸಂತೆ ಬೈಪಾಸ್ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಂಗಾಧರ್ ಹಾಗೂ ಬಿಜೆಪಿ ಬೆಂಬಲಿಗರಾದ ಪಾರ್ವತಿ ಎಂಬುವವರ ನಡುವೆ ಜಗಳ ನಡೆಯುತ್ತಿದ್ದಾಗ ವರದಿಗಾರ ಹರೀಶ್ ಕುಮಾರ್ ಅವರು ಗಲಾಟೆ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರಾದ ಅಕ್ಮಲ್ ಪಾಶ ಹಾಗೂ ಗಂಗಾಧರ್ ಕ್ಯಾಮೆರಾ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಹರೀಶ್ ಕುಮಾರ್ ಅವರು ನೀಡಿದ ದೂರನ್ನು ವಿಳಂಬವಾಗಿ ಸ್ವೀಕರಿಸಿ ಮೊಕದ್ದಮೆ ದಾಖಲಿಸಲಾಗಿದೆ. ಆದರೆ ಕಾಂಗ್ರೆಸ್ ಶಾಸಕರ ಒತ್ತಡದಿಂದ ಹರೀಶ್ ಕುಮಾರ್ ಹಾಗೂ ಬಿಜೆಪಿಯ ಎಸ್.ಎನ್.ರಘು ಅವರ ವಿರುದ್ಧವೇ ಕೊಲೆಯತ್ನ ಪ್ರಕರಣ ಶನಿವಾರಸಂತೆ ಠಾಣೆಯಲ್ಲಿ ದಾಖಲಾಗಿದೆ ಎಂದು ಆರೋಪಿಸಿದರು. ಡಾ.ಮಂತರ್‌ಗೌಡ ಅವರು ಕಾಂಗ್ರೆಸ್‌ಗೆ ಮಾತ್ರ ಶಾಸಕರಲ್ಲ, ಮಡಿಕೇರಿ ಕ್ಷೇತ್ರದ ಜನರಿಗೆ ಶಾಸಕರು ಎಂಬುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಾರ್ಯಕರ್ತರು ಹೇಳಿದ್ದೆಲ್ಲವೂ ಸತ್ಯ ಎಂದು ತಿಳಿದು ಬಿಜೆಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಸಲ್ಲದು ಎಂದು ಕಂಠಿ ಕಾರ್ಯಪ್ಪ ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷ ಎಂ.ಸಿ.ಗೌತಮ್ ಮಾತನಾಡಿ ತಕ್ಷಣ ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣವನ್ನು ಕೈಬಿಡಬೇಕು. ತಪ್ಪಿದಲ್ಲಿ ಜಿಲ್ಲಾಮಟ್ಟದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಸೋಮೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಂತೆ ವರ್ತಿಸುತ್ತಿದ್ದಾರೆ. ಕಚೇರಿಗಳಲ್ಲಿ ಅಧಿಕಾರಿಗಳನ್ನೇ ಬೆದರಿಸುತ್ತಾರೆ ಎಂಬ ದೂರು ಕೇಳಿಬರುತ್ತಿದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ದರ್ಶನ್ ಜೋಯಪ್ಪ, ಕೃಷ್ಣಪ್ಪ ಇದ್ದರು.








