

ಮಡಿಕೇರಿ ಮೇ 1 NEWS DESK : ಕೊಡಗಿನ ಜನರ ಬಹುಕಾಲದ ಬೇಡಿಕೆಯಾಗಿರುವ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಕುರಿತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಆ ಮೂಲಕ ಕ್ರೀಡಾಸಕ್ತರ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಮುಕ್ಕಾಟಿರ ತಿಮ್ಮಯ್ಯ ನಾಣಯ್ಯ ತಿಳಿಸಿದ್ದಾರೆ.
ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.
ಸಣ್ಣ ಜಿಲ್ಲೆಯಾಗಿರುವ ಕೊಡಗನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಇಡೀ ಪ್ರಪಂಚಕ್ಕೆ ತಿಳಿಯುವಂತೆ ಮಾಡಿದ್ದಾರೆ. ಇದೀಗ ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಯುವ ಪ್ರತಿಭೆಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಸೈನಿಕರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಕೊಡಗು ಜಿಲ್ಲೆಯದ್ದಾಗಿದೆ.
ದೇಶದ ಮುಂದಿನ ಭವಿಷ್ಯವಾಗಿರುವ ಯುವ ಪೀಳಿಗೆಯನ್ನು ಇದೇ ಮಾರ್ಗದಲ್ಲಿ ಕೊಂಡೊಯ್ಯುವ ಜವಾಬ್ದಾರಿ ಸಮಾಜ ಬಾಂಧವರದ್ದಾಗಿದೆ. ಕ್ರೀಡೆ ಕೊಡಗಿನ ಶಕ್ತಿಯಾಗಿದ್ದು, ಜಿಲ್ಲೆಯಲ್ಲಿ ಕ್ರೀಡಾ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯ ಸರಕಾರ ಆಸಕ್ತಿ ತೋರಬೇಕು ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಮಕ್ಕಳು ಸಜ್ಜನರ ಸಹವಾಸ ಮಾಡುವಂತೆ ಪೋಷಕರು ಎಚ್ಚರ ವಹಿಸಬೇಕು. ಮಕ್ಕಳ ಬಗ್ಗೆ ತಾರತಮ್ಯ ತೋರದೆ ಅವರಿಷ್ಟದ ಕ್ಷೇತ್ರದಲ್ಲಿ ಮುನ್ನಡೆಯಲು ಪ್ರೋತ್ಸಾಹ ನೀಡಬೇಕು. ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯ ಕುರಿತು ಅರಿವು ಮೂಡಿಸಬೇಕೆಂದು ಮುಕ್ಕಾಟಿರ ತಿಮ್ಮಯ್ಯ ನಾಣಯ್ಯ ಸಲಹೆ ನೀಡಿದರು.
ಕೂರ್ಗ್ ಕ್ರಿಕೆಟ್ ಫೌಂಡೇಷನ್ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಕೊಡವ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸೇರ್ಪಡೆಗೊಂಡಿದೆ. ಹಾಕಿಹಬ್ಬ ಹೊಸ ದಾಖಲೆ ಬರೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ದೇಶ ಸೇವೆಯ ಮನೋಭಾವ ಹೊಂದಿರುವ ಕೊಡವ ಜನಾಂಗ ಶಿಸ್ತಿಗೆ ಹೆಸರುವಾಸಿಯಾಗಿದೆ. ಕ್ರೀಡಾಜಿಲ್ಲೆ ಕೊಡಗಿನಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದು, ರಾಷ್ಟ್ರ ಮಟ್ಟಕ್ಕೆ ಉತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡುವ ಉದ್ದೇಶ ಹೊಂದಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಕಿಯೊಂದಿಗೆ ಕ್ರಿಕೆಟ್ ಅನ್ನು ಕೂಡ ಬೆಳೆಸುವ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಪ್ರತಿಭೆಗಳು ಗುರುತಿಸಿಕೊಳ್ಳುವಂತಾಗಬೇಕು. ಆ ಮೂಲಕ ಕೊಡಗು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಕೂರ್ಗ್ ಕ್ರಿಕೆಟ್ ಫೌಂಡೇಶನ್‍ನ ಹಿರಿಯ ಸಲಹೆಗಾರ ಕಿಶನ್ ಮಾದಪ್ಪ ಮಾತನಾಡಿ, ಜಿಲ್ಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕು. ಕರ್ನಾಟಕ ತಂಡದಲ್ಲೂ ಕೊಡಗಿನ ಪ್ರತಿಭೆಗಳು ಗುರುತಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಂದ್ಯಾವಳಿಯ ಮುಖ್ಯ ಸಂಚಾಲಕ ಪೊರ್ಕೊಂಡ ಸುನಿಲ್, ಪ್ರಮುಖರಾದ ಕೊಕ್ಕಲೆರ ಅಪ್ಪಯ್ಯ, ಪಂದ್ಯಾವಳಿಯ ನಿರ್ದೇಶಕರು ಹಾಗೂ ಫ್ರಾಂಚೈಸಿಗಳ ನಾಯಕರು ಉಪಸ್ಥಿತರಿದ್ದರು.
ಪೊರ್ಕೊಂಡ ಡಿಂಪಲ್ ದೇಚಮ್ಮ ಪ್ರಾರ್ಥಿಸಿ, ಕೂರ್ಗ್ ಕ್ರಿಕೆಟ್ ಫೌಂಡೇಶನ್ ನ ನಿರ್ದೇಶಕ ಕುಲ್ಲೇಟಿರ ಶಾಂತ ಕಾಳಪ್ಪ ಸ್ವಾಗತಿಸಿ, ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಕೂರ್ಗ್ ಬ್ಲಾಸ್ಟರ್ಸ್ ಮತ್ತು ಕೂರ್ಗ್ ಕೊಡವ ಟ್ರೈಬ್ಸ್ ನಡುವೆ ಮೊದಲ ಪಂದ್ಯಾವಳಿ ನಡೆಯಿತು.
ಮೇ 15ರವರೆಗೆ ಪಂದ್ಯಾವಳಿ ನಡೆಯಲಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.1.50 ಲಕ್ಷ, ದ್ವಿತೀಯ 75 ಸಾವಿರ, ತೃತೀಯ 25 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು. 10 ಫ್ರಾಂಚೈಸಿಗಳನ್ನು ಒಳಗೊಂಡಂತೆ ಇದೇ ಪ್ರಥಮ ಬಾರಿಗೆ ಲೆದರ್ ಬಾಲ್ ಕ್ರೆಕೆಟ್ ಪಂದ್ಯಾವಳಿ ನಡೆಯಲಿದೆ. ಮೊದಲ ವರ್ಷದ ಫ್ರಾಂಚೈಸಿಗಳಾಗಿ ದಿ ಕೊಡವ ಬ್ರೈಟ್, ಕೊಡವ ವಾರಿಯರ್ಸ್, ವೈಲ್ಡ್ ಫ್ಲವರ್ ಹಾತೂರು, ಪ್ರಗತಿ ಕ್ರಿಕೆಟರ್ಸ್, ಕೂರ್ಗ್ ಬ್ಲಾಸ್ಟರ್ಸ್, ರಾಯಲ್ ಟೈಗರ್ಸ್, ಅಂಜಿಗೇರಿ ನಾಡ್, ಕೂರ್ಗ್ ಯುನೈಟೆಡ್, ಎಂ.ಟಿ.ಬಿ. ರಾಯಲ್ಸ್, ಟೀಮ್ ಲೀವರೇಜ್ ಭಾಗವಹಿಸಲಿದೆ.









