
ಮಡಿಕೇರಿ ಮೇ 1 NEWS DESK : ಕೊಡಗು ಜಿಲ್ಲಾ ಎಐಟಿಯುಸಿ ಕಾರ್ಮಿಕ ಸಂಘಟನೆ ವತಿಯಿಂದ ಬಿಳಿಗೇರಿ ಗ್ರಾಮದಲ್ಲಿ ವಿಶ್ವ ಕಾರ್ಮಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರ ನೇತೃತ್ವದಲ್ಲಿ ಟಾಟಾ ಸಂಸ್ಥೆಯ ಜಂಬೂರು ತೋಟದ ಕಾರ್ಮಿಕರ ಸಮ್ಮುಖದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭ ಮಾತನಾಡಿದ ಹೆಚ್.ಎಂ.ಸೋಮಪ್ಪ ಅವರು ಕಾರ್ಮಿಕರ ಶ್ರಮದಿಂದ ಇಂದು ದೇಶ ಪ್ರಗತಿಯನ್ನು ಸಾಧಿಸುತ್ತಿದೆ. ಕಾರ್ಮಿಕ ವರ್ಗ ಸದಾ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು.
ನೆರೆದಿದ್ದ ಕಾರ್ಮಿಕರು ಶ್ರಮಿಕ ವರ್ಗದ ಪರ ಘೋಷಣೆಗಳನ್ನು ಕೂಗಿದರು. ಹೋಬಳಿ ಅಧ್ಯಕ್ಷ ಗಣೇಶ, ಕಾರ್ಮಿಕ ನಾಯಕ ಲೋಕೇಶ್, ಸೂರ್ಯ, ಪ್ರೇಮ, ಸಂಜೀವ, ಕೆ.ಎಂ.ನಾರಾಯಣ, ರಮೇಶ್ ಮತ್ತಿತರ ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










