
ಸುಂಟಿಕೊಪ್ಪ ಮೇ 6 NEWS DESK : 7ನೇ ಹೊಸಕೋಟೆ ಸಂತ ಸೆಬಾಸ್ಟೀನ್ ದೇವಾಲಯದ ವಾರ್ಷಿಕೋತ್ಸವದ 2 ದಿನದ ವಿಶೇಷ ಪೂಜೆ ಸೇರಿದಂತೆ ಆರಾಧನೆ, ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಹಾಗೂ ದೇವಾಲಯದ ಸುತ್ತ ಸಂತ ಸಬಾಸ್ಟಿನ್ ಅವರ ಮೂರ್ತಿಯ ಮೆರವಣಿಗೆಯನ್ನು ನೇರವೇರಿಸಲಾಯಿತು.
7ನೇ ಹೊಸಕೋಟೆಯ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ವಂ.ರೆ.ಫಾದರ್ ಸೆಬಾಸ್ಟಿನ್ ಪೂವತ್ತಿಗಲ್ ಅವರು ಸಂಜೆ ದೇವಾಲಯದಲ್ಲಿ ಧ್ವಜಾರೋಹಣ ನೇರವೇರಿಸುವ ಮೂಲಕ ನೂತನ ದೇವಾಲಯದಲ್ಲಿ ಹಬ್ಬದ ಆರಾಧನೆ ಹಾಗೂ ವಿಶೇಷ ಬಲಿ ಪೂಜೆಯನ್ನು ಸಲ್ಲಿಸಿದರು. ಸಂತ ಸೆಬಾಸ್ಟಿನ್ ವಾರ್ಷಿಕೋತ್ಸವದ ಅಂಗವಾಗಿ ಮಡಿಕೇರಿ, ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಕುಶಾಲನಗರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೈಸ್ತ ಬಾಂಧವರು ಅಂಬು ಕಾಣಿಕೆಯ ಹರಕೆಗಳನ್ನು ಸಲ್ಲಿಸಿದರು.
ನಂತರ ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಗುರುಗಳಾದ ವಂ.ರೆ.ಫಾದರ್ ಟೋಮಿ ಕಳ್ಳಿಪಾತ್ ಅವರು ಹಬ್ಬದ ಅಡಂಬರ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮ ಪ್ರಸಾದವನ್ನು ನೀಡಿದರು.
ಸಂತ ಸಬಾಸ್ಟೀನ್ ಅವರ ಮೂರ್ತಿಯನ್ನು ಹಿಡಿದು ದೇವಾಲಯದ ಆವರಣದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ಕೊನೆಯಲ್ಲಿ ಆರ್ಶಿವಚನವನ್ನು ನೀಡುವ ಮೂಲಕ 2 ದಿನದ ವಾರ್ಷಿಕೋತ್ಸವ ಸಮಾರಂಭಕ್ಕೆ ತೆರೆ ಎಳೆದರು.
ಈ ಸಂದರ್ಭ ನೂತನ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮರದ ಕೆತ್ತನೆ ಕೆಲಸ ನಿರ್ವಹಿಸಿದ್ದ ಕೆತ್ತನೆಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೇಕ್ರೆಟ್ ಆರ್ಟ್ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.








