
ಮಡಿಕೇರಿ ಜೂ.1 NEWS DESK : ಅಪ್ರಾಪ್ತ ಚಾಲಿಸಿದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರನಗರದಲ್ಲಿ 2024 ಮೇ 31 ರಂದು ಬೈಕ್ ಸವಾರರೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಮಾಲೀಕರಾದ ಬಾಲಕನ ತಾಯಿ ತುಳಸಿ.ಟಿ ಹಾಗೂ ತಂದೆ ಪರಮೇಶ್ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಶಾಲನಗರ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿನಲ್ಲಿ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಚಿಕ್ಕತ್ತೂರು ಗ್ರಾಮದ ನಿವಾಸಿ ಶಿವಶಂಕರ್ (22) ಮೃತಪಟ್ಟಿದ್ದರು. ಬೈಕ್ ಸವಾರ ಮೃತನಾಗಿರುವ ಕುರಿತು ದೂರು ಸ್ವೀಕರಿಸಿದ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು 279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಈ ಪ್ರಕರಣದಲ್ಲಿ ಸುಂದರನಗರ ವಿನಾಯಕ ಬಡವಾಣೆ ನಿವಾಸಿ ತುಳಸಿ.ಟಿ ಹಾಗೂ ಪರಮೇಶ್ ಅವರ ಅಪ್ರಾಪ್ತ ವಯಸ್ಸಿನ ಪುತ್ರ ಟ್ರ್ಯಾಕ್ಟರ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಅಪಘಾತಗೊಳಿಸಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಪ್ರಾಪ್ತನಾಗಿರುವುದರಿಂದ ಟ್ರ್ಯಾಕ್ಟರ್ ಮಾಲೀಕರಾದ ತುಳಸಿ.ಟಿ ಹಾಗೂ ಪತಿ ಪರಮೇಶ್ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸದರಿ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿ ಈ ಹಿಂದೆ 2023 ಮೇ 31 ರಂದು ಸುಂದರನಗರ ಹಾರಂಗಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿರುವ ಸಂದರ್ಭ ಪಾದಚಾರಿಗೆ ಡಿಕ್ಕಿಯಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ನ್ಯಾಯಾಲಯದ ಮೂಲಕ ಶಿಕ್ಷೆಯೂ ಆಗಿತ್ತು.








