
ಮಡಿಕೇರಿ NEWS DESK ಜ.22 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಕೊಡಗು ಜಿಲ್ಲಾ ಸಮಿತಿ ಜ.23 ರಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಅಧ್ಯಕ್ಷ ಜಿ.ಕೆ.ದಿನೇಶ್ ಹಾಗೂ ಉಪಾಧ್ಯಕ್ಷ ಹೆಚ್.ಎಸ್.ಯೋಗೇಶ್, ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಕನಿಷ್ಟ ವೇತನ ರೂ.31 ಸಾವಿರ ಪಾವತಿ ಮಾಡಬೇಕು, ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸಿಬ್ಬಂದಿಗಳ ಸಂಖ್ಯೆ ಕಡಿತ ಆದೇಶ ರದ್ದು ಮಾಡಬೇಕು, ಜೀತ ಪದ್ದತಿಯಿಂದ ಮುಕ್ತಿಗೊಳಿಸಬೇಕು, ಬೀದರ್ ಮಾದರಿಯ ಸಹಕಾರ ಸಂಘವನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಬೇಕು, ವಾರದ ರಜೆ, ಬಾಕಿ ಸಂಬಳ, ಹೆರಿಗೆ ರಜೆಯ ವೇತನವನ್ನು ನೀಡಬೇಕು, ಕೆಲಸದ ಸಮಯವನ್ನು ನಿಗದಿಪಡಿಸಬೇಕು, ಇಎಸ್‌ಐ ಮತ್ತು ಪಿಎಫ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.








