
ಮಡಿಕೇರಿ NEWS DESK ಸೆ.14 : ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ವಿಜೇತ ತಂಡಗಳಿಗೆ ನಸುಕಿನಲ್ಲಿ ಬಹುಮಾನ ನೀಡುವ ಸ್ಥಳವನ್ನು ಗಾಂಧಿ ಮೈದಾನದಿಂದ ಬನ್ನಿಮಂಟಪದ ಎ.ವಿ ಶಾಲೆಯ ಬಳಿಗೆ ಸ್ಥಳಾಂತರ ಮಾಡಬೇಕು ಎಂದು ಮಡಿಕೇರಿ ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರು ಹಾಗೂ ಪುರಸಭೆಯ ಮಾಜಿ ಸದಸ್ಯ ಎಂ.ಪಿ.ಕೃಷ್ಣರಾಜು ಒತ್ತಾಯಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಶಮಂಟಪಗಳ ಪೈಕಿ ಹಲವು ಮಂಟಪಗಳು ಬನ್ನಿಮಂಟಪಕ್ಕೆ ಬರುತ್ತಿಲ್ಲ. ಸಂಪ್ರದಾಯ ನಿಯಮಬದ್ಧವಾಗಿ ಪಾಲನೆಯಾಗುತ್ತಿಲ್ಲ. ಅಲ್ಲದೆ ಗಾಂಧಿ ಮೈದಾನದ ಆಸುಪಾಸಿನಲ್ಲೇ ಅಪಾರ ಜನದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಬಹುಮಾನ ಘೋಷಿಸುವ ಸ್ಥಳವನ್ನು ಬದಲಾವಣೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖವಾಗಿ ಬನ್ನಿಮಂಟಪದ ವ್ಯಾಪ್ತಿಯ ಎ.ವಿ. ಶಾಲೆಯ ಬಳಿಯೇ ಬಹುಮಾನ ಘೋಷಣೆ ಮತ್ತು ಬಹುಮಾನ ನೀಡುವ ಕಾರ್ಯಕ್ರಮ ನಡೆದರೆ ಅನಿವಾರ್ಯವಾಗಿ ಎಲ್ಲಾ 10 ಮಂಟಪಗಳು ಇಲ್ಲಿಗೆ ಬರುತ್ತವೆ. ಆ ಮೂಲಕ ಸಂಪ್ರದಾಯ ಕೂಡ ಪಾಲನೆಯಾಗುತ್ತದೆ ಮತ್ತು ಜನಸಂದಣಿ ಉಂಟಾಗುವುದನ್ನೂ ತಪ್ಪಿಸಬಹುದಾಗಿದೆ. ಈ ಕುರಿತು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಚಿಂತನೆ ನಡೆಸಬೇಕು ಎಂದು ಎಂ.ಪಿ.ಕೃಷ್ಣರಾಜು ಮನವಿ ಮಾಡಿದ್ದಾರೆ. ಮಡಿಕೇರಿ ದಸರಾ ಜನೋತ್ಸವ ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಜನಾಕರ್ಷಣೆ ಪಡೆದುಕೊಳ್ಳುತ್ತಿದೆ. ನಗರಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ದಸರಾ ಉತ್ಸವದಲ್ಲಿ ಕೆಲವೊಂದು ಸುಧಾರಣಾ ಕ್ರಮ ಅನಿವಾರ್ಯವಾಗಿದೆ. ದಶಮಂಟಪಗಳ ಕಲಾಕೃತಿಗಳ ಪ್ರದರ್ಶನವನ್ನು ಸರ್ವಜನರು ಕಣ್ತುಂಬಿಕೊಳ್ಳಲು ಸಾಧ್ಯವಾಗತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








