
ನಾಪೋಕ್ಲು ಸೆ.15 NEWS DESK : ಅರೆಭಾಷೆ ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅವರು ಅವುಗಳನ್ನು ಅನುಸರಿಸಿ ಮುನ್ನಡೆಯುವಂತೆ ಹಿರಿಯರು ಪ್ರೇರಣೆ ನೀಡಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಕರೆ ನೀಡಿದ್ದಾರೆ. ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಕೈಲ್ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅರೆ ಭಾಷೆ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅಕಾಡೆಮಿಯಿಂದ ಸಾಧ್ಯವಾದಷ್ಟು ಅನುದಾನ ಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ, ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಕೇವಲ ಸಾಂಕೇತಿಕವಾಗಿ ಮಾತ್ರ ಆಚರಣೆ ಮಾಡದೆ, ಮನೆ ಮನೆಗಳಲ್ಲೂ ಆಚರಣೆ ಮಾಡಿದಾಗ ಸಂಸ್ಕೃತಿ ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮೈಸೂರು ಗೌಡ ಸಮಾಜದ ಕಾರ್ಯ ಶೈಲಿಯನ್ನು ಪ್ರಶಂಸಿಸಿದ ಅವರು, ಎಲ್ಲಾ ಸಮಾಜಗಳು ಇದೇ ಮಾದರಿಯಲ್ಲಿ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ ಎಂದರು. ಕೊಡಗು ಗೌಡ ಸಮಾಜದ ಒಕ್ಕೂಟ ಎಲ್ಲಾ ಗೌಡ ಸಮಾಜಗಳ ಪ್ರಗತಿಗಾಗಿ ಶ್ರಮಿಸುವುದಲ್ಲದೆ, ಆ ಸಮಾಜಗಳ ಮೂಲಕ ಜನಾಂಗದ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ ಅವರು ಮಾತನಾಡಿ, ಅರೇಭಾಷೆಯನ್ನು ಉಳಿಸಿ ಬೆಳೆಸಲು ಅಕಾಡೆಮಿಯು ಶಾಲಾ ಕಾಲೇಜುಗಳಲ್ಲಿ ಅರೇ ಭಾಷೆ ಸಂಘಗಳನ್ನು ಸ್ಥಾಪಿಸುವ ಮೂಲಕ ಪ್ರಯತ್ನ ಪಡುತ್ತಿದೆ, ಅಲ್ಲದೆ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಪ್ರಯತ್ನ ಪಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಮೈಸೂರಿನಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಮಾತನಾಡಿ, ಪ್ರಾಚೀನ ಕಾಲದಲ್ಲಿ ಕೊಡಗಿನಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಆಚರಿಸುತ್ತಿದ್ದ ಕೈಲು ಮುಹೂರ್ತ ಹಬ್ಬದ ವೈಶಿಷ್ಟತೆಯನ್ನು ಸಭೆಗೆ ವಿವರಿಸಿದರು. ಸಮಾಜದ ಹಿರಿಯರು ಆಚರಿಸಿಕೊಂಡು ಬಂದ ಸಂಸ್ಕೃತಿ ಆಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಪದಾಧಿಕಾರಿಗಳಾದ ಕುದುಪಜೆ ಚಂದ್ರಶೇಖರ್, ನಡುವಟ್ಟಿರ ಲಕ್ಷ್ಮಣ್, ನಡುಮನೆ ಚಂಗಪ್ಪ, ನಿರ್ದೇಶಕರಾದ ಹೊಸೂರು ರಾಘವ, ಕುಂಟುಪುಣಿ ರಮೇಶ್, ಕೊಂಬಾರನ ಸುಬ್ಬಯ್ಯ, ಪಾಣತ್ತಲೆ ವಸಂತ್, ತೋಟಂಬೈಲು ಇಂದಿರಾ, ಚಪ್ಪೆರ ಯಮುನಾ, ಕುಂಟುಪುಣಿ ಶೀಲ ಮೊದಲಾದವರು ಉಪಸ್ಥಿತರಿದ್ದರು. ಮೈಸೂರು ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೆÇನ್ನೆಟಿ ನಂದ ಸ್ವಾಗತಿಸಿದರು. ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮೈಸೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷ ನಡುವಟ್ಟಿರ ಗೀತಾ ಲಕ್ಷ್ಮಣ ವಂದಿಸಿದರು.
ವರದಿ : ದುಗ್ಗಳ ಸದಾನಂದ.









