
ಮಡಿಕೇರಿ ಸೆ.15 NEWS DESK : ಕನ್ನಡ ನಾಡಿನ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಸೆ.21 ರಂದು ಮಡಿಕೇರಿಯಲ್ಲಿ ‘ಕರುನಾಡು ಗಾಟ್ ಟ್ಯಾಲೆಂಟ್ ಸೆಷನ್-ಸೀಸನ್-2’ ಆಡಿಷನ್ ಆಯೋಜಿತವಾಗಿದೆಯೆಂದು ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಪಿ.ಎನ್.ದಿನೇಶ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈವೆಂಟ್ ಕ್ಯುರೇಟರ್‍ಗಳಾದ ಕಿಂಬರ್ಲಿ ಕೂರ್ಗ್ ಸಹಯೋಗದಲ್ಲಿ, ನಗರದ ರಾಜಾಸೀಟ್ ರಸ್ತೆಯಲ್ಲಿನ ಹೋಟೆಲ್ ನ್ಯೂ ರಾಜದರ್ಶನ್‍ನಲ್ಲಿ ಸೂಚಿತ ದಿನದಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಆಡಿಷನ್ ಆಯೋಜಿತವಾಗಿದೆ. ಆಸಕ್ತರು ಅಂದು ಬೆಳಗ್ಗೆ ತಮ್ಮ ಪ್ರದರ್ಶನಕ್ಕೆ ಅಗತ್ಯವಾದ ಸಲಕರಣೆಗಳೊಂದಿಗೆ, ನಿಗದಿತ ಶುಲ್ಕ ಪಾವತಿಸಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.6362250778, 9164831989ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಆಡಿಷನ್‍ನಲ್ಲಿ ನೃತ್ಯ, ಹಾಡುಗಾರಿಕೆ, ಮಿಮಿಕ್ರಿ, ಯೋಗ, ಜಾದು, ನಾಟಕ, ಹಾಡುಗಾರಿಕೆ, ಸಂಗೀತ ವಾದ್ಯ, ಕಲೆ, ಸಾಹಿತ್ಯ ಮತ್ತು ಇನ್ನಿತರ ಯಾವುದೇ ಪ್ರಾಕಾರಗಳಲ್ಲಿನ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ತೀರ್ಪುಗಾರರಾಗಿ ಸುಮಿತ್ ಅಮೀನ್, ಸುರಕ್ಷಾ ದಾಸ್, ಪ್ರವೀಣ್ ಜೈನ್ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು. ಕನ್ನಡ ನಾಡಿನ ಪ್ರತಿಭೆಗಳ ಶೋಧಕ್ಕಾಗಿ ಈಗಾಗಲೆ ಕುಮಟಾ, ಕಾರ್ಕಳ, ಕುಂದಾಪುರ, ಶಿವಮೊಗ್ಗ, ಶಿರಸಿ, ಉಡುಪಿ, ಮೈಸೂರು, ಹುಬ್ಬಳ್ಳಿಯಲ್ಲಿ ಆಡಿಷನ್‍ಗಳನ್ನು ಮಾಡಲಾಗಿದೆ. ಇದೀಗ ಮಡಿಕೇರಿಯಲ್ಲಿ ಆಡಿಷನ್ ಆಯೋಜಿತವಾಗಿದ್ದು, ಇದರಲ್ಲಿ ರಾಜ್ಯದ ಯಾವುದೇ ಪ್ರದೇಶದಲ್ಲಿನ ಪ್ರತಿಭೆಗಳ ಪಾಲ್ಗೊಳ್ಳುವಿಕೆಗೆ ಅವಕಾಶವನ್ನು ಒದಗಿಸಲಾಗಿದೆ. ಮುಂದಿನ ಅಕ್ಟೋಬರ್‍ನಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲು ಆಡಿಷನ್ ನಡೆಯಲಿದೆ. ಇದರೊಂದಿಗೆ ಆಯ್ಕೆಯಾದ ಪ್ರತಿಭೆಗಳ ನಡುವೆ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಸ್ಪರ್ಧೆಯನ್ನು ಏರ್ಪಡಿಸಿ, ಮೊದಲ ವಿಜೇತರಿಗೆ 1.50ಲಕ್ಷ ನಗದು, ದ್ವಿತೀಯ ಸ್ಥಾನ ಪಡೆಯುವವರಿಗೆ 1 ಲಕ್ಷ ಮತ್ತು ತೃತೀಯ 50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ವಿಜೇತರಿಗೆ ಗೋವಾ, ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಮಾಡಲು ಅವಕಾಶವನ್ನು ಒದಗಿಸಿಕೊಡಲಾಗುತ್ತದೆ. ನಂತರ ಈ ಒಟ್ಟು ಕಾರ್ಯಕ್ರಮದ 38 ಕಂತುಗಳನ್ನು ‘ಓಟಿಟಿ’ ವೇದಿಕೆಯ ಮೂಲಕ ಬಿಡಗಡೆಮಾಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಸಚಿನ್ ವರ್ಗೀಸ್, ಕಿಂಬರ್ಲಿ ಸಂಸ್ಥೆಯ ಆರ್.ವೈಶಿತ ಮತ್ತು ಟಿ.ಟಿ.ಸಾನ್ವಿ ಉಪಸ್ಥಿತರಿದ್ದರು.









