

ನಾಪೋಕ್ಲು ಸೆ.16 NEWS DESK : ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದು ಮುಖ್ಯಮಂತಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಕೈಲ್ ಮುಹೂರ್ತ ಸಂತೋಷಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಕೊಡಗಿನಲ್ಲಿ ವಿವಿಧ ಜನಾಂಗದವರು ತಮ್ಮ ಆಚಾರ, ವಿಚಾರ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಗೌಡ ಸಮಾಜ ಕೊಡಗಿನಲ್ಲಿ ಮಾತ್ರವಲ್ಲ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಗೌಡ ಜನಾಂಗದವರು ರಾಜಕೀಯ, ಕ್ರೀಡೆ, ಸೈನ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು. ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಗೌಡ ಸಮಾಜದ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲಾ ಭಾಗದ ಜನರು ಒಗ್ಗೂಡಬೇಕು. ಶಿಸ್ತುಬದ್ಧ ಕಾರ್ಯಕ್ರಮ ಸಂತಸ ತಂದಿದೆ. ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು. ಬೇರೆ ಸಮಾಜದವರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಗೌಡ ಸಮಾಜದವರು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳು ಇನ್ನೊಂದು ಸಮಾಜದವರಿಗೆ ಮಾರ್ಗದರ್ಶನ ವಾಗಬೇಕೆ ಹೊರತು ಸ್ಪರ್ಧೆಯಾಗಬಾರದು ಎಂದರು. ಗೌಡ ಒಕ್ಕೂಟದ ಉಪಾಧ್ಯಕ್ಷ ತೇನನ ರಾಜೇಶ್ ಮಾತನಾಡಿ, ಶಾಸಕರು ಗೌಡ ಜನಾಂಗದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಭಾಗಮಂಡಲ ಗೌಡ ಸಮಾಜಕ್ಕೆ ಅನುದಾನ ನೀಡಿದ್ದಾರೆ. ಗೌಡ ಜನಾಂಗದ ಹಿರಿಯರಾದ ಕುರುಂಜಿ ವೆಂಕಟರಮಣ ಗೌಡರು ಕೊಡಗಿಗೆ ಗೌಡ ಜನಾಂಗಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಕೊಡಗು ಗೌಡ ಸಮಾಜದ ಅಭಿವೃದ್ಧಿಗಾಗಿ ಕೊಡುಗೆಗಳನ್ನು ನೀಡಿದ ಶಾಸಕರು ಅಭಿನಂದನಾರ್ಹರು ಎಂದರು. ಅದರಂತೆ ಮುಜರಾಯಿ ಇಲಾಖೆಯಿಂದ ಭಗಂಡೇಶ್ವರ ದೇವಸ್ಥಾನದ ಮುಂಬರುವ ಆಡಳಿತ ಮಂಡಳಿಗೆ ಗೌಡ ಜನಾಂಗದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಅಲ್ಲದೆ ಜಾತಿ ಸಮೀಕ್ಷೆಯಲ್ಲಿ ಗೌಡ ಎ ಎಂದು ಉಪಜಾತಿಯಲ್ಲಿ ಅರೆಭಾಷೆ ಎಂದು ನಮೂದಿಸಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಅವರು ನಿರೀಕ್ಷೆಗೂ ಮೀರಿದ ಕ್ರೀಡಾಭಿಮಾನಿಗಳು ಬಂದಿರುವುದು ತುಂಬಾ ಸಂತೋಷದ ವಿಚಾರ. ಸ್ಪರ್ಧೆಯಲ್ಲಿ ಸೋಲು ಗೆಲುವು ಇರುವುದೇ ಆದರೆ ಭಾಗವಹಿಸುವ ಹುಮ್ಮಸ್ಸು ಎಲ್ಲರಿಗೂ ಇರಬೇಕು ಮಹಿಳಾ ಒಕ್ಕೂಟ ರಚನೆಯಾದ ಮೇಲೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದು, ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದೊಂದಿಗೆ ಮಹಿಳಾ ಒಕ್ಕೂಟ ಕೈಜೋಡಿಸಿ ಈ ಕಾರ್ಯಕ್ರಮ ನಡೆಸಲಾಗಿದ್ದು, ಬಹಳ ಅಚ್ಚುಕಟ್ಟಾದ ಜನ ಮೆಚ್ಚುವ ಕಾರ್ಯಕ್ರಮ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಜನಾಂಗ ಬಾಂಧವರಿಗಾಗಿ ಪುಟ್ಟ ಮಕ್ಕಳಿಂದ ವಯಸ್ಕರ ವರೆಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು, ಮ್ಯಾರಥಾನ್ ತೆಂಗಿನಕಾಯಿಗೆ ಗುಂಡು ಹೊಡೆಯುವುದು ಹಗ್ಗ ಜಗ್ಗಾಟ ಸ್ಪರ್ಧೆಗಳು ಜರುಗಿದವು. ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಚೇರಂಬಾಣೆ ಗೌಡ ಸಮಾಜದ ಉಪಾಧ್ಯಕ್ಷರಾದ ಕೇಕಡ ದಿನೇಶ್ ಅವರು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ದಮಯಂತಿ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಬೇಕಲ್ ರಮಾನಾಥ್ ಸೇರಿದಂತೆ ಗಣ್ಯರು ಹಾಜರಿದ್ದರು. ಮಕ್ಕಳಿಂದ ಛದ್ಮವೇಷ ಪ್ರದರ್ಶನ, ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನ ರಂಜಿಸಿತು. ಅತಿಥಿ ಗಣ್ಯರಿಂದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಶೆ ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿ, ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಸ್ವಾಗತಿಸಿದರು. ಸಮಾಜದ ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ ಮತ್ತು ಒಕ್ಕೂಟದ ನಿರ್ದೇಶಕರಾದ ಬೈಮನ ಜ್ಯೋತಿ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ವಂದಿಸಿದರು.
ವರದಿ : ದುಗ್ಗಳ ಸದಾನಂದ.









