
ಮಡಿಕೇರಿ NEWS DESK ಸೆ.16 : ರಾಜ್ಯ ಸರ್ಕಾರದ ವತಿಯಿಂದ ಸೆ.22 ರಿಂದ ಅ.12 ರವರೆಗೆ ಹಿಂದುಳಿದ ಆಯೋಗದಿಂದ ನಡೆಯುವ ಜನತೆಯ ಶೈಕ್ಷಣಿಕ ಹಾಗೂ ಸಾಮಾಜಿಕ, ಆರ್ಥಿಕ ಜನಗಣತಿಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದವರು ತಪ್ಪದೆ “ವೀರಶೈವ ಲಿಂಗಾಯಿತ” ಎಂದು ಬರೆಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಅನುಸೂಚಿಯ 8ರ ಧರ್ಮದ ಕಾಲಂನಲ್ಲಿ ನೀಡಿರುವ 11ನೇ ಕೋಡ್ ನ ‘ಇತರೆ’ ಎಂದಿರುವ ಸ್ಥಳದಲ್ಲಿ ‘ವೀರಶೈವ ಲಿಂಗಾಯಿತ ಎಂದು ಮತ್ತು 9 ರ ಜಾತಿ ಕಾಲಂ ನಲ್ಲಿ ಲಿಂಗಾಯಿತ ಅಥಾವ ವೀರಶೈವ ಎಂದು ನಿಗದಿತ ಸಂಕೇತ ಸಂಖ್ಯೆಯನ್ನು ನೀಡಿ ನಮೂದಿಸಬೇಕು. 10ರ ಉಪಜಾತಿ ಕಾಲಂ ನಲ್ಲಿ ತಮ್ಮ ಉಪಜಾತಿಗಳನ್ನು ಕೋಡ್ ಸಮೇತ ದಾಖಲಿಸಿ ಮಾಹಿತಿಗಳನ್ನು ತಪ್ಪಿಲ್ಲದಂತೆ ನೀಡಲು ಸಲಹೆ ನೀಡಿದರು. ಸಾರ್ಕಾರವು ಮುಂದಿನ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಜಾತಿಗಣತಿಯ ದತ್ತಾಂಶಗಳನ್ನು ಉಪಯೋಗಿಸಿಕೊಳ್ಳುಲು ಅನುಕೂಲವಾಗುತ್ತದೆ. ಆದ ಕಾರಣ ವೀರಶೈವ ಲಿಂಗಾಯಿತ ಸಮುದಾಯದವರು ನಿಖರವಾದ ಮಾಹಿತಿಯನ್ನು ನೀಡುವುದು ಹಾಗೂ ನಮ್ಮ ಸಮುದಾಯದ ಶೈಕ್ಷಣಿಕ ಉದ್ಯೋಗ ಆಸ್ತಿ, ಆರ್ಥಿಕ ಪರಿಸ್ಥಿತಿ ಈ ಎಲ್ಲಾ ಮಾಹಿತಿಗಳನ್ನು ನೀಡುವಂತೆ ತಿಳಿಸಿದರು. ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು, ಶಿಕ್ಷಣ, ಉದ್ಯೋಗಗಳ ಬಗ್ಗೆ ಸರ್ಕಾರದ ಸೌಲಭ್ಯಗಳು, ಮೀಸಲಾತಿ ಆಧಾರಗಳಲ್ಲಿ ಹಂಚಿಕೆ ಆಗುವುದರಿಂದ ವೀರಶೈವ ಲಿಂಗಾಯಿತ ಸಮುದಾಯದವರು ಗಣತಿದಾರರು ಕೇಳುವ ಎಲ್ಲಾ ಮಾಹಿತಿಯನ್ನು ಸಮರ್ಪಕವಾಗಿ ನೀಡುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಘಟಕದ ಪದಾಧಿಕಾರಿಗಳಾದ ಎ.ಪಿ.ಉದಯ ಕುಮಾರ್, ಎಂ.ಎಸ್.ಗಣೇಶ್ ಹಾಗೂ ಬಿ.ವಿ.ಬಸವರಾಜು ಉಪಸ್ಥಿತರಿದ್ದರು.








