
ವಿರಾಜಪೇಟೆ ಸೆ.17 NEWS DESK : ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜದಲ್ಲಿ ವಿಶೇಷವಾದಂತಹ ಸ್ಥಾನಮಾನವನ್ನು ಪಡೆಯುವುದರೊಂದಿಗೆ ಸಹಕಾರ ಮನೋಭಾವನೆಯನ್ನು ಬೆಳೆಸಲು ಎನ್.ಎಸ್.ಎಸ್ ಸಹಕಾರಿಯಾಗಿದೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕೊಡಗು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ನೋಡಲ್ ಅಧಿಕಾರಿ ಡಾ.ಕೆ.ಸಿ.ದಯಾನಂದ ಅಭಿಪ್ರಾಯಪಟ್ಟರು. ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ಎನ್.ಎಸ್.ಎಸ್ ಘಟಕ ಉದ್ಘಾಟಿಸಿ, ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುವುದರೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಹೇಗೆ ಒಗ್ಗೂಡಬೇಕು ಹಾಗೂ ಸಮಾಜದ ವಿವಿಧ ಸ್ಥರಗಳ ಬಗ್ಗೆ ಗಮನಹರಿಸುವಂತೆ ಮಾಡಲು ಪ್ರಮುಖವಾದ ವೇದಿಕೆಯಾಗಿದೆ ಎಂದರು. ಸಮಾಜದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದರೊಂದಿಗೆ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಎನ್ಎಸ್ಎಸ್ ಸಹಕಾರಿಯಾಗಿದೆ. ಇದು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ರಚನಾತ್ಮಕ ಮತ್ತು ಕ್ರಿಯಾಶೀಲವಾಗಿ ಎಲ್ಲಾ ವಿಚಾರಗಳಲ್ಲು ಭಾಗವಹಿಸುವಂತೆ ಮಾಡುತ್ತದೆ ಎಂದು ಹೇಳಿದರು. ಎನ್ಎಸ್ಎಸ್ ಸ್ವಯಂಸೇವಕರಲ್ಲಿ ನಾಯಕತ್ವ ಗುಣ, ಸರಳತೆ, ಶಿಸ್ತು, ಸಂಯಮ, ಪ್ರಾಮಾಣಿಕತೆ, ಸಹನೆ, ತಾಳ್ಮೆಯಂತಹ ಗುಣಗಳನ್ನು ಮೈಗೂಡಿಸಿಕೊಂಡು ಡೆಡಿಕೇಶನ್, ಡಿಟರ್ಮಿನೇಷನ್, ಡಿಸಿಪ್ಲಿನ್ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ಡನ ಎನ್ಎಸ್ಎಸ್ ನಲ್ಲಿ ಎಲ್ಲವೂ ಹಿತಕರ, ಎಲ್ಲವೂ ಪ್ರಯೋಜನಕರವಾಗಿರುತ್ತದೆ. ಇದು ನಮ್ಮಲ್ಲಿರುವ ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ಸೇವೆಗೆ ಸಿದ್ದರಾಗುವಂತೆ ಮಾಡುವುದರೊಂದಿಗೆ ಬೇಡುವ ಕೈಗಳನ್ನು ನೀಡುವ ಕೈಯಾಗಿ ಬದಲಾಯಿಸುವ ಶಕ್ತಿ ಇದಕ್ಕಿದೆ. ವಿದ್ಯಾರ್ಥಿ ಜೀವನದಲ್ಲಿ ಸ್ವಯಂಸೇವಕರಾಗಿ ನಿರಂತರ ಸೇವೆಯನ್ನು ಮಾಡುವುದರಿಂದ ನಂತರದ ಜೀವನದಲ್ಲಿ ಸ್ವಯಂ ಪ್ರೇರಿತವಾಗಿ ಸಮಾಜ ಸೇವೆಯಲ್ಲಿ ತೊಡಗುವಂತೆ ಮಾಡುವ ಮನೋಭಾವನೆಯನ್ನು ನಮ್ಮಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡುತ್ತದೆ ಹಾಗೂ ಯಾವುದೇ ಪ್ರತಿಫಲದ ಅಪೇಕ್ಷಯಿಲ್ಲದೆ ಉತ್ತಮ ಸಮಾಜ ನಿರ್ಮಾಣಕ್ಕೆ ನಮ್ಮನ್ನು ಪ್ರೇರೇಪಿಸುತ್ತದೆ ಎಂದರು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕರಾದ ಪ್ರಿಯ ಮುದ್ದಪ್ಪ, ಎನ್ಎಸ್ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಎನ್ ಎಸ್ ಎಸ್ ನಾಯಕ ರಿಶಿ ಸೋಮಣ್ಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ, ಎನ್.ಎಸ್.ಎಸ್ ಸ್ವಯಂ ಸೇವಕರು ಆಡಳಿತ ಸಿಬ್ಬಂದಿಗಳು ಹಾಜರಿದ್ದರು.









