
ಮಡಿಕೇರಿ ಸೆ.17 NEWS DESK : ನಿವೇಶನ, ವಸತಿ, ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಕೊಡಗು ಜಿಲ್ಲೆಯ ಕಾರ್ಮಿಕರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸೂಚಿಸುವಂತೆ ಒತ್ತಾಯಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಸಂಘಟನೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಪತ್ರ ಸಲ್ಲಿಸಿತು. ಮಡಿಕೇರಿಗೆ ಭೇಟಿ ನೀಡಿದ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ಜಿಲ್ಲೆಯ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಕಾಫಿ, ಕರಿಮೆಣಸು, ಏಲಕ್ಕಿ, ಜೇನು ಸೇರಿದಂತೆ ವಾಣಿಜ್ಯ ಬೆಳೆಗಳ ಕೃಷಿಯ ಮೂಲಕ ಕೊಡಗು ಜಿಲ್ಲೆ ಕರ್ನಾಟಕ ರಾಜ್ಯಕ್ಕೆ ಗಣನೀಯ ಕೊಡುಗೆಯನ್ನು ನೀಡುತ್ತಿದೆ. ಜಿಲ್ಲೆಯ ತೋಟಗಳಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ದುಡಿಯುತ್ತಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕ ವರ್ಗ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.
ಆದ್ದರಿಂದ ಕೊಡಗು ಜಿಲ್ಲಾಧಿಕಾರಿಗಳು ಕಾರ್ಮಿಕ ಸಂಘಟನೆಗಳ ನಾಯಕರ ಸಭೆ ನಡೆಸಿ ಕಾರ್ಮಿಕರ ಸಮಸ್ಯೆ ಆಲಿಸಬೇಕು. ಅರ್ಜಿ ಸಲ್ಲಿಸಿದ 45 ದಿನಗಳ ಒಳಗೆ ಕಾರ್ಮಿಕ ಕಡ್ಡಾಯ ನೋಂದವಣೆ ಹಾಗೂ ಮಾನ್ಯತೆ ನೀಡಬೇಕೆಂದು ಐ.ಎಲ್.ಓ. ಸಮಾವೇಶದ ಸಿ82 ನಿರ್ಣಯಗಳನ್ನು ಕೇಂದ್ರ ಸರಕಾರ ಅನುಮೋದಿಸಬೇಕು, ಹಂಗಾಮಿ ಪ್ಲಾಂಟೇಶನ್ ಕಾರ್ಮಿಕರಿಗೆ ಪಿ.ಎಫ್, ಇ.ಎಸ್ ಇಲ್ಲದ ಕಾರಣ ಜೀವನ ಭದ್ರತೆಯ ಕೊರತೆಯಿಂದ ಬೀದಿ ಪಾಲಾಗುತ್ತಿದ್ದಾರೆ. ಆದ್ದರಿಂದ ಅರ್ಹ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯ ಕಾನೂನು ತಿದ್ದುಪಡಿಯ ಮೂಲಕ ನ್ಯಾಯ ಒದಗಿಸಬೇಕು, ವನ್ಯಜೀವಿ ಹಾಗೂ ಮಾನವ ಸಂಘರ್ಷದಿಂದ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಾರ್ಮಿಕರ ಜೀವ ರಕ್ಷಣೆ ಮಾಡಲು ಶಾಶ್ವತ ಪರಿಹಾರ ಸೂಚಿಸಬೇಕು. ಬಾಡಿಗೆ ಮತ್ತು ಲೈನ್ ಮನೆಗಳಲ್ಲಿರುವ ಕಾರ್ಮಿಕರಿಗೆ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಹೆಚ್.ಎಂ.ಸೋಮಪ್ಪ ಮನವಿ ಮಾಡಿದರು.









