
ಮಡಿಕೇರಿ ಸೆ.18 NEWS DESK : ಐತಿಹಾಸಿಕ ದಸರಾ ಉತ್ಸವಕ್ಕೆ ಪೂರಕವಾಗಿ ನಡೆಯಬೇಕಾದ ನಗರದ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುವಂತೆ ಮಾಡುವ ಮೂಲಕ ನಗರಸಭೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅವರು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ದಸರಾ ಉತ್ಸವದ ಹಿನ್ನಲೆ ತುರ್ತಾಗಿ ರಸ್ತೆ ಕಾಮಗಾರಿಗಳು ನಡೆಯಬೇಕಿದೆ. ಈ ಹಿನ್ನೆಲೆ ಎನ್‍ಡಿಆರ್‍ಫ್ ನಿಯಮಗಳಂತೆ ಜಿಲ್ಲಾಧಿಕಾರಿಗಳು ರೂ.38 ಲಕ್ಷ ಅನುದಾನದ ಕಾಮಗಾರಿಗಳಿಗೆ ಅವಕಾಶ ಒದಗಿಸಿದ್ದರು. ಆದರೆ, ಈ ಕಾಮಗಾರಿಗಳ ಗುತ್ತಿಗೆಯನ್ನು ತಾವು ಬಯಸಿದವರಿಗೆ ನೀಡಿಲ್ಲವೆನ್ನುವ ಕಾರಣಗಳ ಹಿನ್ನೆಲೆಯಲ್ಲಿ ನಗರಸಭೆಯ ಬಿಜೆಪಿ ಸದಸ್ಯರು, ಆರಂಭಗೊಂಡಿದ್ದ ರಸ್ತೆ ದುರಸ್ತಿ ಕಾರ್ಯ ಸ್ಥಗಿತಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ನಗರದ ಕೆಎಸ್‍ಆರ್‍ಟಿಸಿ ಡಿಪೋ ಬಳಿ, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೆ ಕಾನೂನು ಉಲ್ಲಂಘಿಸಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಮಳಿಗೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು. ಮಡಿಕೇರಿ ನಗರಸಭೆಯ ಅಧ್ಯಕ್ಷರು ತಮ್ಮ ಸ್ವಂತ ಅಭಿಪ್ರಾಯ ಮತ್ತು ಚಿಂತನೆಗಳಂತೆ ಆಡಳಿತ ನಡೆಸುತ್ತಿಲ್ಲ. ಇದರಿಂದ ನಗರವ್ಯಾಪ್ತಿಯಲ್ಲಿ ಉದ್ದೇಶಿತ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪ್ರಸ್ತುತ ನಗರದಲ್ಲಿ ಯಾವುದಾದರು ಅಭಿವೃದ್ಧಿಗಳು ನಡೆದಿದ್ದರೆ ಅದು ಶಾಸಕ ಡಾ.ಮಂತರ್ ಗೌಡ ಅವರು 2024-25ನೇ ಸಾಲಿನಲ್ಲಿ ನಗರಸಭೆಗೆ ಒದಗಿಸಿದ ರೂ.3 ಕೋಟಿ ಅನುದಾನದಿಂದ ಮಾತ್ರ. ಈ ಸಾಲಿನಲ್ಲಿಯು ಶಾಸಕರು ನಗರಸಭೆಗೆ ರೂ.3.50 ಕೋಟಿ ಅನುದಾನ ಒದಗಿಸಿದ್ದಾರೆ ಎಂದರು. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದ್ದು, ಕೇವಲ ಒಂದು ಸಭೆಯಷ್ಟೆ ನಡೆದಿದೆ. 4 ಸ್ಥಾಯಿ ಸಮಿತಿಗಳನ್ನು ರಚಿಸುವಂತೆ ಸೂಚಿಸಲಾಗಿದ್ದರೂ ನಗರಸಭೆಯಲ್ಲಿರುವ ಬಿಜೆಪಿ ಆಡಳಿತಕ್ಕೆ ಸಮಿತಿಗಳನ್ನು ರಚಿಸುವ ಆಸಕ್ತಿ ಇಲ್ಲವಾಗಿದೆ. ಅನಧಿಕೃತ ಮಳೆಗೆಗಳ ತೆರವಿನ ಬಗ್ಗೆ ಒತ್ತಾಯ ಮತ್ತು ಸ್ಥಾಯಿ ಸಮಿತಿ ರಚನೆಯ ವಿಚಾರ ಪ್ರಸ್ತಾಪವಾಗಬಹುದೆನ್ನುವ ಕಾರಣದಿಂದ ಸಭೆಗಳನ್ನು ನಡೆಸುತ್ತಿಲ್ಲವೆಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ನಾಮ ನಿರ್ದೇಶಿತ ಸದಸ್ಯರಾದ ಮಂಡೀರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಬಿ.ಎನ್.ಮುದ್ದುರಾಜ್ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷರಾದ ಜುಲೇಕಾಬಿ ಉಪಸ್ಥಿತರಿದ್ದರು.








