
ಮಡಿಕೇರಿ ಸೆ.19 NEWS DESK : ಕೊಡಗು ವಿಷ್ಣು ಸೇನಾ ಸಮಿತಿ ವತಿಯಿಂದ ಸೆ.20 ರಂದು ನಟ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುವುದೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ನಾಗರಾಜ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಅಬ್ದುಲ್ ಕಲಾಂ ಲೇಜೌಟ್‍ನಲ್ಲಿರುವ ಜನ ವಿಕಾಸ್ ಸೇವಾ ಟ್ರಸ್ಟ್ ವೃದ್ಧಾಶ್ರಮದಲ್ಲಿ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮಗಿರಿ ವಾರಪತ್ರಿಕೆ ಸಂಪಾದಕರಾದ ಉಳ್ಳಿಯಡ ಪೂವಯ್ಯ, ಡಾಟಿ ಪೂವಯ್ಯ, ಪ್ರಮುಖರಾದ ಪಿ.ಜಿ.ಮಂಜುನಾಥ್, ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ರಫೀಕ್ (ದಾದಾ) ಪಾಲ್ಗೊಳ್ಳಲಿದ್ದಾರೆ. 5 ಸ್ಟಾರ್ ಸಿಂಗರ್ಸ್ ತಂಡದ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆಶ್ರಮದ ವಾಸಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಷ್ಣು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಾಗರಾಜ್ ಮನವಿ ಮಾಡಿದರು. ಸಮಿತಿ ಅಧ್ಯಕ್ಷ ರಫೀಕ್ (ದಾದಾ) ಮಾತನಾಡಿ, ಡಾ.ವಿಷ್ಣುವರ್ಧನ್ ಅಭಿಮಾನಿಗಳ ಕಣ್ಣೊರೆಸುವ ತಂತ್ರಕ್ಕೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ ಎಂದು ಆರೋಪಿಸಿದರು. ಡಾ.ವಿಷ್ಣುವರ್ಧನ್ ಸಮಾಧಿಯನ್ನು ರಾತ್ರೋರಾತ್ರಿ ನಿರ್ನಾಮ ಮಾಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಶೀಘ್ರ ಸಮಾಧಿ ಮರು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರ ಪಿ.ಜಿ.ಮಂಜುನಾಥ್ ಹಾಗೂ ಸದಸ್ಯ ರಮೇಶ್ ರೈ ಉಪಸ್ಥಿತರಿದ್ದರು.









