
ಕುಶಾಲನಗರ ಆ.11 NEWS DESK : ಬೀದಿಬದಿ ಮೀನು ವ್ಯಾಪಾರಿಯನ್ನು ತೆರವುಗೊಳಿಸಿದ ಪುರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಬಿಜೆಪಿ ಪ್ರಮುಖರು ಪುರಸಭೆ ಕಚೇರಿಯ ಆವರಣದಲ್ಲೇ ಮೀನು ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕುಶಾಲನಗರ ಪ್ರವಾಸಿ ಮಂದಿರದ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳು ಹಲವು ಸಮಯದಿಂದ ವ್ಯಾಪಾರ ನಡೆಸುತ್ತಿದ್ದು, ಹಾರಂಗಿಯ ವ್ಯಾಪಾರಿಯೊಬ್ಬರು ಹೊಳೆ ಮೀನು ತಂದು ರಸ್ತೆ ಬದಿಯಲ್ಲಿ ಕುಳಿತು ಮಾರಾಟ ಮಾಡುತ್ತಿದ್ದರು. ಈ ವೇಳೆ ಪುರಸಭೆ ಸಿಬ್ಬಂದಿ ಅವರ ವ್ಯಾಪಾರವನ್ನು ತೆರವುಗೊಳಿಸಿದ್ದರು. ಈ ಕುರಿತು ಮಾಹಿತಿ ಪಡೆದ ಬಿಜೆಪಿ ಪ್ರಮುಖರು ವ್ಯಾಪಾರಿಯ ನೆರವಿಗೆ ಧಾವಿಸಿ, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಆರೋಪಿಸಿದರು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಪ್ರಮುಖರು ಮೀನು ವ್ಯಾಪಾರಿಯ ಬುಟ್ಟಿಯೊಂದಿಗೆ ಪುರಸಭೆ ಕಚೇರಿಗೆ ತೆರಳಿ, ಕಚೇರಿ ಆವರಣದಲ್ಲೇ ಮೀನು ಮಾರಾಟ ಆರಂಭಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಬಿಜೆಪಿ ಪ್ರಮುಖ ಭಾಸ್ಕರ್ ನಾಯಕ್ ಮಾತನಾಡಿ, ಅರಣ್ಯ ಇಲಾಖೆ ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ನದಿಗಳಿಂದ ಮೀನು ಹಿಡಿದು ಮಾರಾಟ ಮಾಡುವ ಬೆಸ್ತ ಸಮುದಾಯದವರು ಹಲವು ವರ್ಷಗಳಿಂದ ಮೀನು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಏಕಾಏಕಿ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಕಾರಣ ನೀಡಿ ಅವರನ್ನು ತೆರವುಗೊಳಿಸಿರುವುದು ಬೇಸರದ ಸಂಗತಿ ಎಂದರು. ಅದೇ ರಸ್ತೆಯಲ್ಲಿ ನಿಯಮಬಾಹಿರವಾಗಿ ಹಲವು ಅಂಗಡಿಗಳು ಇದ್ದರೂ, ಕೇವಲ ಒಬ್ಬ ವ್ಯಾಪಾರಿಯನ್ನು ಗುರುತಿಸಿ ತೆರವುಗೊಳಿಸಿರುವುದು ಸರಿಯಲ್ಲ. ರಸ್ತೆ ಬದಿಯಲ್ಲಿ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ಬಡ ವ್ಯಾಪಾರಿಗಳಿಗೆ ಪುರಸಭೆ ಅಧಿಕಾರಿಗಳಿಂದ ಕಿರುಕುಳ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಪುರಸಭೆ ಮುಖ್ಯಾಧಿಕಾರಿಗಳು ಅನ್ಯ ಕಾರ್ಯನಿಮಿತ್ತ ಮಡಿಕೇರಿಗೆ ತೆರಳಿದ್ದ ಸಂದರ್ಭ, ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಪ್ರಮುಖರು ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದರು. ಕಚೇರಿ ಆವರಣದಿಂದ ಮೀನು ತೆರವುಗೊಳಿಸುವಂತೆ ಆಗ್ರಹಿಸಿದ ಘಟನೆ ಕೂಡ ನಡೆಯಿತು. ಬಡ ಬೀದಿಬದಿ ವ್ಯಾಪಾರಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಪ್ರಮುಖರ ನೇತೃತ್ವದಲ್ಲಿ ಪುರಸಭೆ ಕಚೇರಿಯೊಳಗೆ ಮೀನು ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗಿದೆ ಎಂದು ಭಾಸ್ಕರ್ ನಾಯಕ್ ತಿಳಿಸಿದರು. ಪ್ರತಿಭಟನೆಯಲ್ಲಿ ಎಂ.ಎಂ. ಚರಣ್, ಮಧುಸೂದನ್, ಎಂ.ಡಿ. ಕೃಷ್ಣಪ್ಪ, ಪ್ರಶಾಂತ್, ಸುಮನ್, ರಾಮು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.










